ಶ್ರೀನಗರ: ಸಂವಿಧಾನದ 370ನೇ ವಿಧಿ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನವನ್ನು ಹಿಂಪಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಬದಲಾವಣೆಯಾಗಿದೆ. ಜನ ಸಾಮಾನ್ಯರು ತಮ್ಮಿಷ್ಟದಂತೆ ಜೀವನ ನಡೆಸುತ್ತಿದ್ದಾರೆ ಎಂದು ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಶನಿವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು 2019ರ ಇದೇ ದಿನ (ಆಗಸ್ಟ್ 5ರಂದು) ಹಿಂಪಡೆದಿತ್ತು. ಜೊತೆಗೆ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತ್ತು.
ಮಾಧ್ಯಮದವರೊಂದಿಗೆ ಮಾತನಾಡಿರುವ ಸಿನ್ಹಾ, 'ಉಗ್ರರು ಹಾಗೂ ಪ್ರತ್ಯೇಕತಾವಾದಿಗಳು ನಡೆಸುತ್ತಿದ್ದ ಪಾಕಿಸ್ತಾನ ಪ್ರಾಯೋಜಿತ ಬಂದ್‌ಗಳಿಂದಾಗಿ ವರ್ಷದಲ್ಲಿ 150 ದಿನ ಶಾಲೆ-ಕಾಲೇಜುಗಳು, ಉದ್ದಿಮೆಗಳು ಸ್ಥಗಿತಗೊಳ್ಳುತ್ತಿದ್ದದ್ದು ಅಂತ್ಯಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಜನ ಸಾಮಾನ್ಯರು ತಮ್ಮ ಇಚ್ಛಾನುಸಾರ ಬದುಕುತ್ತಿರುವುದು ವಾಸ್ತವದಲ್ಲಿ ಕಾಣಬಹುದಾದ ದೊಡ್ಡ ಬದಲಾವಣೆಯಾಗಿದೆ. ರಸ್ತೆಗಳಲ್ಲಿ ನಡೆಯುತ್ತಿದ್ದ ಗಲಭೆಗಳು ಕೊನೆಗೊಂಡಿವೆ' ಎಂದು ಹೇಳಿದ್ದಾರೆ.
ಮುಂದುವರಿದು, ಕಾಶ್ಮೀರದ ಯುವಕರು ಇದೀಗ ರಾತ್ರಿ ವೇಳೆ ಧೈರ್ಯವಾಗಿ ಹೊರಗೆ ಸುತ್ತಾಡುತ್ತಿದ್ದಾರೆ. ಪೊಲೊವೀವ್ ಮಾರುಕಟ್ಟೆ ಮತ್ತು ಝೇಲಂ ರಿವರ್‌ಫ್ರಂಟ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಶ್ರೀನಗರದ ಈ ಎರಡೂ ಸಾರ್ವಜನಿಕ ಪ್ರದೇಶಗಳನ್ನು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಇತ್ತೀಚೆಗೆ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
'ಕಾಶ್ಮೀರದ ಯುವಕರ ಕನಸುಗಳಿಗೆ ಇದೀಗ ರೆಕ್ಕೆ ಬಂದಿವೆ. ಅವರು ಮುಂದಿನ ದಿನಗಳಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲಿದ್ದಾರೆ' ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.