ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಔಷಧೀಯ ವಸ್ತುಗಳನ್ನು ಹಾಗೂ ಪರಿಸರದಲ್ಲಿ ದೊರಕುವ ಗಿಡ,ಎಲೆ, ಹೂ ಇತ್ಯಾದಿಗಳನ್ನು ಬಳಸಿ ತಯಾರಿಸುವ ಕರ್ಕಾಟಕ ಮಾಸದ ಔಷÀಧೀಯ ಗಂಜಿ ಕಾರ್ಯಕ್ರಮ ಭಾನುವಾರ ಸಂಭ್ರಮದಿಂದ ನಡೆಯಿತು. ಈ ಸಂದರ್ಭದಲ್ಲಿ ತ್ರಿಕ್ಕರಿಪುರದ ಕೃಷ್ಣಪ್ರಸಾದ್ ವೈದ್ಯರ್ ಮತ್ತು ಪುತ್ತೂರಿನ ಬಳ್ಳಿ ಆಯುರ್ ಗ್ರಾಮ ಆಸ್ಪತ್ರೆಯ ನಿರ್ದೇಶಕ ಡಾ. ಸುಪ್ರೀತ್ ಲೋಬೋ ಕರ್ಕಾಟಕಮಾಸದಲ್ಲಿ ಕಾರ್ಯಕ್ರಮದ ಮಹತ್ವದ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತಾಡಿದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು, ಆರೋಗ್ಯ ಸಂಪತ್ತು ಇಲ್ಲದಿದ್ದರೆ ಉಳಿದ ಸಂಪತ್ತು ಇದ್ದರೂ ವ್ಯರ್ಥ. ಪವಿತ್ರ ಆಹಾರ ಸೇವಿಸುವುದರ ಜೊತೆಗೆ ನಾವು ಒಳ್ಳೆಯ ಹೃದಯಿಗಳಾಗಿ ಇನ್ನೊಬ್ಬರ ಸಂತೋಷಕ್ಕಾಗಿ ಬಾಳೋಣ ಎಂದರು.
ಈ ಸಂದರ್ಭದಲ್ಲಿ 260 ತಳಿಯ ಸಾವಯವ ಬೀಜಸಂರಕ್ಷಣೆ, 35 ಬಗೆಯ ತುಳಸಿ ಬೆಳೆಸುವುದಲ್ಲದೆ 1500ಕ್ಕೂ ಹೆಚ್ಚು ಔಷಧೀಯ ಗಿಡಗಳ ಸಂರಕ್ಷಣೆ ಮಾಡುತ್ತಿರುವ ಸಿಮ್‍ಜಿತ್ ತಿಲ್ಲಂಗೇರಿಯವರಿಗೆ ಈ ವರ್ಷದ “ ಆಯುಶ್ರೀ” ಪುರಸ್ಕಾರ ನೀಡಿ ಗೌರವಿಸಲಾಯಿತು. ಕೊಂಡೆವೂರು ಮಠದ ಟ್ರಸ್ಟಿ ಶಶಿಧರ ಶೆಟ್ಟಿ ಗ್ರಾಮಚಾವಡಿ ಮತ್ತು ಆಹಾರ-ಔಷಧಂ ಗುಂಪಿನ ಸಜೀವನ್ ಪಾಲಕ್ಕಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಜಯದೇವನ್ ಕಣ್ಣೂರ್ ಅವರು ಶುಭ ನುಡಿಗಳನ್ನಾಡಿದರು. ಕು.ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆ, ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಸುನೀಶ್ ವೈದ್ಯರ್ ಸ್ವಾಗತಿಸಿ, ಪಿ.ರಾಮಕೃಷ್ಣನ್ ವಂದಿಸಿದರು. ಸದಾಶಿವ ಮೋಂತಿಮಾರು ನಿರೂಪಿಸಿದರು.
1200 ಕ್ಕೂ ಹೆಚ್ಚು ಜನರು ಔಷಧೀಯ ವಸ್ತು ಮತ್ತು ಪರಿಸರದ ಗಿಡ, ಎಲೆ, ಹೂಗಳನ್ನು ಬಳಸಿ ತಯಾರಿಸಿದ ವಿವಿಧ ಬಗೆಯ ಖಾದ್ಯವಸ್ತುಗಳಿಂದ ಕೂಡಿದ ಔಷಧೀಯ ಗಂಜಿ ಸವಿದು ಸಂತಸ ಪಟ್ಟರು. ಆಹಾರ ಸೇವನೆ ಸಂದರ್ಭದಲ್ಲಿ ಸಜೀವನ್ ಅವರು ಖಾದ್ಯಪದಾರ್ಥಗಳಿಗೆ ಬಳಸಿದ ವಸ್ತುಗಳು ಮತ್ತು ಆರೋಗ್ಯದ ಮೇಲೆ ಅವುಗಳಿಂದ ಉಂಟಾಗುವ ಪರಿಣಾಮಗಳನ್ನು ವಿವರಿಸಿದರು.