ಜೀವಕೋಶ ಎಂದರೆ ಗೊತ್ತಲ್ಲ; ನಿಮ್ಮ, ನಮ್ಮ ದೇಹವನ್ನು ಕಟ್ಟಿರುವ ಜೈವಿಕ ಇಟ್ಟಿಗೆಗಳು. ಅತಿ ಸೂಕ್ಷ್ಮವಾದ, ಕಣ್ಣಿಗೆ ಕಾಣದ, ಶರೀರದ ಘಟಕಗಳು. ಇವು ಕಣ್ಣಿಗೆ ಕಾಣದಿದ್ದರೂ ಅವುಗಳ ಚಟುವಟಿಕೆಯಿಂದ ನಾವೆಲ್ಲರೂ ಪ್ರಭಾವಿತರೇ. ಮೊಟ್ಟೆ ಒಂದು ಜೀವಕೋಶ. ಬಹುಶಃ ಅದರ ಬೆಲೆ ಹತ್ತು ರೂಪಾಯಿಯೊಳಗೇ ಇದೆ.
ಹೆನ್ರಿಯೆಟ್ಟಾ ಲ್ಯಾಕ್ಸ್ ಒಬ್ಬ ಅಮೆರಿಕನ್ ನೀಗ್ರೊ ಮಹಿಳೆ. ಎಪ್ಪತ್ತು ವರ್ಷಗಳ ಹಿಂದೆಯೇ ಈಕೆಯ ಮರಣವಾಗಿದೆ. ಆದರೆ ಅವಳ ಹೆಸರು 'ಹೇಲಾ ಜೀವಕೋಶ'ಗಳ ರೂಪದಲ್ಲಿ ಅಮರವಾಗಿದೆ. ಅಥವಾ ಜೀವಕೋಶಗಳು ಅವಳ ದೇಹದ ಅಂಗವಾಗಿದ್ದರಿಂದ, ಆಕೆ ಇನ್ನೂ ಜೀವಂತವಾಗಿದ್ದಾಳೆ ಎಂದೂ ಹೇಳಬಹುದು. ಎಪ್ಪತ್ತು ವರ್ಷಗಳ ಹಿಂದೆ ಈಕೆ ಗರ್ಭಕೋಶದ ಕ್ಯಾನ್ಸರಿನಿಂದ ಬಳಲುತ್ತಿದ್ದಳು. ಚಿಕಿತ್ಸೆಗಾಗಿ ಆಗಿನ ಸುಪ್ರಸಿದ್ಧ ಜಾನ್ ಹಾಪ್ಕಿನ್ಸ್ ಕ್ಯಾನ್ಸರ್ ಸಂಶೋಧನಾಲಯ ಹಾಗೂ ಆಸ್ಪತ್ರೆಯನ್ನು ಸೇರಿದ್ದಳು. ಚಿಕಿತ್ಸೆ ಗುಣವಾಗದೆ ಮರಣಿಸಿದ್ದಳು.
ಆದರೆ ಆಕೆಯ ಜೀವಕೋಶಗಳು ಇನ್ನೂ ಜೀವಂತವಾಗಿದ್ದುವು. ಆಸ್ಪತ್ರೆಯಲ್ಲಿದ್ದ ಡಾ. ಜಾರ್ಜ್ ಗೇ ಎನ್ನುವ ವಿಜ್ಞಾನಿ ಆಸ್ಪತ್ರೆಗೆ ಬಂದ ಪ್ರತಿಯೊಬ್ಬ ಕ್ಯಾನ್ಸರ್ ರೋಗಿಯಿಂದಲೂ ಬಯಾಪ್ಸಿಗೆಂದು ಜೀವಕೋಶಗಳನ್ನು ಹೆಕ್ಕಿದಾಗ, ಅವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದ. ಆದರೆ ಬಹುತೇಕ ಅಂತಹ ಕೋಶಗಳೆಲ್ಲವೂ ಅಲ್ಪ ಕಾಲವಷ್ಟೆ ಬದುಕಿ ಇರುತ್ತಿದ್ದುವು. ವಿಚಿತ್ರ ಎಂದರೆ ಲ್ಯಾಕ್ಸಳ ಜೀವಕೋಶಗಳು ಆಕೆಯ ಮರಣದ ನಂತರವೂ ಸಂಖ್ಯೆಯಲ್ಲಿ ಬೆಳೆಯುತ್ತಲೇ ಇದ್ದುವು. ಹೀಗಾಗಿ ಕ್ಯಾನ್ಸರ್ ರೋಗದ ಕಾರಣಗಳು ಹಾಗೂ ಚಿಕಿತ್ಸೆಗೆ ಬೇಕಾದ ಪ್ರಯೋಗಗಳಿಗೆ ಈ ಜೀವಕೋಶಗಳು ನೆರವಾಗಬಹುದು ಎಂದು ತರ್ಕಿಸಿದ ಗೇ ಅವನ್ನು ಹಾಗೆಯೇ ಉಳಿಸಿಕೊಂಡ. ಅಷ್ಟೇ ಅಲ್ಲ. ತನ್ನಂತೆಯೇ ಕ್ಯಾನ್ಸರ್ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರಿಗೆ ಒಂದಿಷ್ಟು ಹಂಚಿದ. 'ಹೇಲಾ ಕೋಶಗಳು' ಎಂದು ಇವನ್ನು ಗುರುತಿಸಲಾಯಿತು.
ಕ್ರಮೇಣ ಈ ಕೋಶದ ಸಂತಾನಗಳು ವಿಶ್ವದಲ್ಲಿದ್ದ ಬಹುತೇಕ ಕ್ಯಾನ್ಸರ್ ಸಂಶೋಧನಾಲಯಗಳನ್ನು ಸೇರಿದುವು. ಜೊತೆಗೆ ಔಷಧವನ್ನು ರೂಪಿಸುವ ಕಂಪೆನಿಗಳೂ ಇವನ್ನು ಬಳಸಲು ಅರಂಭಿಸಿದುವು. ಮರಣಾನಂತರ ಹೆನ್ರಿಯೆಟ್ಟಾ ಲ್ಯಾಕ್ಸ್ ಜನಪ್ರಿಯಳಾದಳು. ಈ ಮಧ್ಯೆ ರಕ್ತ, ಬಯಾಪ್ಸಿಯ ಜೀವಕೋಶಗಳು, ಮೂಳೆಯ ಮಜ್ಜೆ ಮೊದಲಾದವನ್ನು ರೋಗಿಗಳ ಸಮ್ಮತಿಯಿಲ್ಲದೆ ಪಡೆಯುವುದು ಅನೈತಿಕ ಎನ್ನುವ ನಿಯಮಗಳು ರೂಪುಗೊಂಡವು. ಹೊಸ ಔಷಧಗಳ ಚಿಕಿತ್ಸೆ ನೀಡುವಾಗಲೂ ರೋಗಿಗಳ ಸಮ್ಮತಿ ಪಡೆಯುವುದು ಅನಿವಾರ್ಯವೆನ್ನಿಸಿತು. ಅನುಮತಿ ಪಡೆಯದಂತಹ ಜೀವಕೋಶವೇ ಮೊದಲಾದ ದೇಹದ ಅಂಶಗಳನ್ನು ನಾಶಪಡಿಸಬೇಕೆನ್ನುವ ನಿಯಮ ಗಟ್ಟಿಯಾಯಿತು.
ಆದರೆ ಲ್ಯಾಕ್ಸಳ ಜೀವಕೋಶಗಳ ವಿಷಯದಲ್ಲಿ ಈ ಯಾವುವೂ ನಡೆದಿರಲಿಲ್ಲ. ಆಕೆಗೆ ಚಿಕಿತ್ಸೆ ನೀಡುವಾಗ ಇಂತಹ ನಿಯಮಗಳು ಇರಲಿಲ್ಲವೆಂದರೂ, ಅನಂತರದ ದಿನಗಳಲ್ಲಿ ಈ ಜೀವಕೋಶಗಳನ್ನು ಕೇವಲ ಸಂಶೋಧನೆಗಷ್ಟೆ ಅಲ್ಲದೆ ವ್ಯಾಪಾರಕ್ಕೂ ಬಳಸಲಾಗಿತ್ತು. ಥರ್ಮೋಫೀಶರ್ ಕಂಪೆನಿ ಈ ಜೀವಕೋಶಗಳನ್ನು ಸಂಗ್ರಹಿಸಿ, ಬೆಳೆಸಿ, ಕೆಲವನ್ನು ವಿಶೇಷವಾಗಿ ತಿದ್ದಿ, ಸಂಶೋಧಕರಿಗೆ ಮಾರಾಟ ಮಾಡುತ್ತಿತ್ತು; ಲಾಭ ಪಡೆಯುತ್ತಿತ್ತು.
ಹನ್ನೆರಡು ವರ್ಷಗಳ ಹಿಂದೆ ಹೆನ್ರಿಯೆಟ್ಟಾ ಲ್ಯಾಕ್ಸ್ ಜೀವನ ಕುರಿತು ಪತ್ರಕರ್ತೆ ರೆಬೆಕಾ ಸ್ಕ್ಲೂಟ್ ಎಂಬಾಕೆ 'ದಿ ಇಮ್ಮಾರ್ಟಲ್ ಲೈಫ್ ಆಫ್ ಹೆನ್ರಿಯೆಟ್ಟಾ ಲ್ಯಾಕ್ಸ್' ಎಂಬ ಪುಸ್ತಕವೊಂದನ್ನು ಪ್ರಕಟಿಸಿದ್ದಳು. ಅದರಲ್ಲಿ ಲ್ಯಾಕ್ಸಳ ಅನುಮತಿ ಇಲ್ಲದೆಯೇ ಆಕೆಯ ಜೀವಕೋಶಗಳನ್ನು ಆಸ್ಪತ್ರೆ ಪಡೆದಿದ್ದು ಹಾಗೂ ಅದನ್ನು ವ್ಯಾಪಾರಕ್ಕೆ ಬಳಸಿ ಲಾಭ ಗಳಿಸುತ್ತಿರುವ ಬಗ್ಗೆ ವಿಮರ್ಶಿಸಿದ್ದಳು. ಅಷ್ಟೇ ಅಲ್ಲ, ಬಹುಶಃ ಹೆನ್ರಿಯೆಟ್ಟಾ ಲ್ಯಾಕ್ಸ್ ಅಮೆರಿಕನ್ ನೀಗ್ರೋ ಆಗಿದ್ದಕ್ಕೇ ಹೀಗಾಗಿರಬಹುದೇ - ಎನ್ನುವ ಅಸಮಾನತೆಯ ಪ್ರಶ್ನೆಯನ್ನೂ ಮುಂದಿಟ್ಟಳು. ಇದು ವಿವಾದವನ್ನು ಎಬ್ಬಿಸಿತು. ಹೇಲಾ ಜೀವಕೋಶಗಳ ಬಗ್ಗೆ ಜನಸಾಮಾನ್ಯರೂ ತಿಳಿಯುವಂತಾಯಿತು.
ತಾನು ಮಾಡಿದ್ದು ತಪ್ಪು ಎಂದು ಜಾನ್ ಹಾಪ್ಕಿನ್ಸ್ ಸಂಸ್ಥೆಯೂ ಹೇಳಿತು. ಪರಿಹಾರವಾಗಿ ಹೆನ್ರಿಯೆಟ್ಟಾ ಲ್ಯಾಕ್ಸಳ ನೆನಪಿನಲ್ಲಿ ಕಟ್ಟಡವೊಂದನ್ನು ಕಟ್ಟಿತು. ಲ್ಯಾಕ್ಸಳ ಕುಟುಂಬವೂ ಈ ಕೋಶಗಳನ್ನು ಸಂಶೋಧನೆಗಾಗಿ ಕೊಡುಗೆ ನೀಡಿದ್ದಾಗಿ ಬರೆದು ಕೊಟ್ಟಿತ್ತು. ಆದರೆ ಅದರಿಂದ ಆಕೆಗಾಗಲಿ ಅವರ ವಾರಸುದಾರರಿಗಾಗಲೀ ಏನು ಲಾಭ ಎನ್ನುವ ಪ್ರಶ್ನೆ ಉಳಿದೇ ಇತ್ತು. ಇದೀಗ ಈ ಪ್ರಶ್ನೆಗೂ ಉತ್ತರ ದೊರಕಿದೆ. ಹೆನ್ರಿಯೆಟ್ಟಾ ಲ್ಯಾಕ್ಸಳ ಕುಟುಂಬದವರೊಟ್ಟಿಗೆ ಥರ್ಮೋಫಿಶರ್ ಕಂಪೆನಿ ಒಂದು ಒಪ್ಪಂದ ಮಾಡಿಕೊಂಡಿದೆ. ಲ್ಯಾಕ್ಸಳ ಜೀವಕೋಶಗಳನ್ನು ಕಂಪೆನಿ ವ್ಯಾಪಾರೋದ್ಯಮಕ್ಕೆ ಬಳಸಿಕೊಳ್ಳಲು ತಮ್ಮ ಅಭ್ಯಂತರವೇನೂ ಇಲ್ಲವೆಂದು ಲ್ಯಾಕ್ಸಳ ಕುಟುಂಬ ಹೇಳಿಕೆ ನೀಡಿದೆ. ಈ ವಿವಾದವನ್ನು ಕೊನೆಗೊಳಿಸಿದೆ. ಹೀಗೆ ಲ್ಯಾಕ್ಸ್ ಸತ್ತ ಎಪ್ಪತ್ತು ವರ್ಷಗಳ ನಂತರ ಅವಳ ಜೀವಕೋಶಗಳಿಗೆ ಬೆಲೆ ಸಿಕ್ಕಿದೆ. ಈ ಒಪ್ಪಂದದ ವಿವರಗಳನ್ನು ಮಾತ್ರ ಕಂಪೆನಿ ಹಾಗೂ ಕುಟುಂಬಗಳು ಗುಟ್ಟಾಗಿಯೇ ಇಟ್ಟಿವೆ.
ಲ್ಯಾಕ್ಸಳ ಜೀವಕೋಶಗಳ ಬಗೆಗಿನ ಸಮಸ್ಯೆ ಪರಿಹಾರವಾಯಿತೇನೋ ಸರಿ. ಆದರೆ ಇದೇ ಬಗೆಯಲ್ಲಿ ಯಾವುದೇ ರೋಗಿಯಿಂದ ಪಡೆದ ಅಂಗಾಂಶಗಳನ್ನು ಸಂಶೋಧನೆಗೆ ಬಳಸಿಕೊಳ್ಳಬಹುದೇ ಎನ್ನುವ ಪ್ರಶ್ನೆ ಮುಂದೆ ಬಂದಿದೆ. ಏಕೆಂದರೆ ಬಹಳ ಅಪರೂಪವಾದ ಹಲವು ಕಾಯಿಲೆಗಳ ಅಧ್ಯಯನ ಆ ಕಾಯಿಲೆಗೆ ಬಲಿಯಾದ ರೋಗಿಗಳ ಅಂಗಾಂಶವನ್ನು ಬಳಸಿಯೇ ಆಗಬೇಕು. ಅದಕ್ಕೆ ಚಿಕಿತ್ಸೆಗೂ ಅದೇ ಹಾದಿಯಾಗುತ್ತದೆ. ಹೊಸ ಔಷಧಗಳು ಫಲಕಾರಿಯೇ ಅಲ್ಲವೇ ಎಂದು ತಿಳಿಯಲೂ ನೆರವಾಗಬಹುದು. ಅಂತಹ ಔಷಧಗಳಿಂದ ಲಾಭ ಪಡೆಯುವ ಕಂಪೆನಿಗಳು ಲಾಭವನ್ನು ಹಂಚಿಕೊಳ್ಳಬೇಕಾಗುತ್ತದೆ.
ಇದೇನೋ ಸರಿ. ಆದರೆ ರೋಗಿಗಳಿಗೆ ಈ ವಿಷಯ ತಿಳಿದಿರಬೇಕಲ್ಲ? ಅದು ಗೊತ್ತಿಲ್ಲದೆ ಕೇವಲ ಚಿಕಿತ್ಸೆ ಪಡೆಯಲೆಂದು ಅನುಮತಿ ನೀಡಿದ್ದರೆ? ಭಾರತದಲ್ಲಿ ಕ್ಲಿನಿಕಲ್ ಸಂಶೋಧನೆ ನಡೆಸುವವರು ಕೊಡುವ ಅನುಮತಿ ಪತ್ರದ ಮೇಲೆ ಅದನ್ನು ಓದದೆಯೇ ರೋಗಿಗಳೂ, ಅವರ ಸಂಬಂಧಿಕರೂ ಸಹಿ ಮಾಡುವುದುಂಟು. ಅಂತಹವರಿಗೆ ನೆರವು ನೀಡುವುದು ಯಾರು? ಈ ಪ್ರಶ್ನೆಗೆ ಉತ್ತರ ಮುಂದೆ ಯಾರಾದರೂ ಹೇಳುವರೋ ಕಾಯೋಣ.