ತಿರುವನಂತಪುರ: ಈ ವರ್ಷವೂ ರಾಜ್ಯದ ಸಾರ್ವಜನಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಮಾಹಿತಿ ನೀಡಿದರು. ಒಟ್ಟು 84,000 ಮಕ್ಕಳು 1 ರಿಂದ 10 ನೇ ತರಗತಿಯಿಂದ ಹೊರಗುಳಿದಿದ್ದಾರೆ ಎಂದು ಅಂದಾಜಿಸಲಾಗಿದೆ. ಶಾಲೆ ಆರಂಭವಾಗಿ ತಿಂಗಳು ಕಳೆದರೂ ಅಂಕಿಅಂಶ ಬಿಡುಗಡೆ ಮಾಡದಿರುವುದು ವಿವಾದಕ್ಕೆ ಕಾರಣವಾಗಿತ್ತು.
ಸರ್ಕಾರಿ ಪೋರ್ಟಲ್‍ನಲ್ಲಿನ ಅಂಕಿಅಂಶಗಳ ಪ್ರಕಾರ, ಈ ವರ್ಷ 99,566 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ. 1,58,583 ಮಕ್ಕಳು ಅನುದಾನಿತ ಶಾಲೆಗಳಿಗೆ ಸೇರಿದ್ದಾರೆ. ಸರ್ಕಾರಿ ಮತ್ತು ಅನುದಾನಿತ ವಲಯಗಳಲ್ಲಿ ಒಂದನೇ ತರಗತಿಯಲ್ಲಿ ಒಟ್ಟು 2,58,149 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ ಒಂದನೇ ತರಗತಿಗೆ 2,68,313 ಮಕ್ಕಳು ಪ್ರವೇಶ ಪಡೆದಿದ್ದರು.
ಈ ವರ್ಷ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಓದುತ್ತಿರುವ ಮಕ್ಕಳ ಸಂಖ್ಯೆ 34,04,724 ರಷ್ಟಿದೆ. ಕಳೆದ ವರ್ಷಕ್ಕಿಂತ 84,000 ಮಕ್ಕಳು ಕಡಿಮೆ ಇದ್ದಾರೆ ಎಂದು ಅಂದಾಜಿಸಲಾಗಿದೆ. ಪಾಲಕ್ಕಾಡ್ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಅನುದಾನ ರಹಿತ ಶಾಲೆಗಳು ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಓದುತ್ತಿರುವ ಒಟ್ಟು ಮಕ್ಕಳ ಸಂಖ್ಯೆ 37,46,647 ರಷ್ಟದೆ.
ಶಾಲೆ ಆರಂಭಗೊಂಡು ಆರನೇ ಕೆಲಸದ ದಿನದಂದು ಮಕ್ಕಳ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಆದರೆ ತಿಂಗಳು ಕಳೆದರೂ ಸರ್ಕಾರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡದಿರುವುದು ಮಕ್ಕಳ ಸಂಖ್ಯೆ ಕಡಿಮೆಯಾಗಿರುವ ಕಾರಣದಿಂದಲೇ ಎಂಬ ತೀವ್ರ ಟೀಕೆ ವ್ಯಕ್ತವಾಗಿದೆ. ಎರಡು ತಿಂಗಳ ನಂತರ ಬಿಡುಗಡೆಯಾದ ಅಂಕಿ-ಅಂಶಗಳಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಸ್ಪಷ್ಟವಾಗಿ ಹೇಳಲು ಶಿಕ್ಷಣ ಇಲಾಖೆಗೆ ಸಾಧ್ಯವಾಗಿಲ್ಲ. ಹಿಂದಿನ ವರ್ಷಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಪ್ರಮುಖ ಸಾಧನೆ ಎಂದು ಸರ್ಕಾರ ಎತ್ತಿ ತೋರಿಸಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಇದು ಸರ್ಕಾರದ ವಚರ್|ಸ್ಸಿನ ಮೇಲೆಯೇ ಪರಿಣಾಮ ಬೀರಿದೆ.