ಜೈಪುರ: ರಾಜಸ್ಥಾನ ಸರ್ಕಾರವು 'ಅತ್ಯಂತ ಭ್ರಷ್ಟ' ಸರ್ಕಾರವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹಲೋತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಪ್ರತಿದಿನ ಹೊಸ ಹಗರಣಗಳು ಮತ್ತು ಅತ್ಯಾಚಾರ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ ಎಂದು ಜೋಶಿ ಹೇಳಿದ್ದಾರೆ.
ದೇಶದಲ್ಲಿ ದಾಖಲಾದ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳಲ್ಲಿ ಶೇಕಡ 16ರಷ್ಟು ಪ್ರಕರಣಗಳು ರಾಜಸ್ಥಾನದಲ್ಲಿ ದಾಖಲಾಗಿವೆ ಎಂದು ಜೋಶಿ ಆರೋಪಿಸಿದ್ದಾರೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರಗಳನ್ನು ರೂಪಿಸಲು ಪಕ್ಷದ ಕಾರ್ಯಕರ್ತರೊಂದಿಗೆ ಜೋಶಿ ಸಭೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜಸ್ಥಾನ ಸರ್ಕಾರವು ದೇಶದ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ. ನೇಮಕಾತಿ ಪರೀಕ್ಷೆಗಳಲ್ಲಿ ಪತ್ರಿಕೆಗಳು 16ಕ್ಕೂ ಹೆಚ್ಚು ಬಾರಿ ಸೋರಿಕೆಯಾಗಿವೆ' ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಗೆಹಲೋತ್ ಅವರು ಬಡವರಿಗೆ ಒಳ್ಳೆಯದನ್ನು ಮಾಡಬೇಕೆಂದು ಬಯಸಿದ್ದರೆ, ನಾಲ್ಕೂವರೆ ವರ್ಷಗಳಲ್ಲಿ ಏಕೆ ಮಾಡಲಿಲ್ಲ ಎಂದು ಜೋಶಿ ಪ್ರಶ್ನಿಸಿದರು. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ರಾಜ್ಯಕ್ಕೆ ಬಿಜೆಪಿ ಸರ್ಕಾರದ ಅಗತ್ಯವಿದೆ ಎಂದರು.
ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಿದ ಜೋಶಿ, ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.