ಕಾಸರಗೋಡು: ಪರವನಡ್ಕದ ಸರ್ಕಾರಿ ವೃದ್ಧಾಶ್ರಮದಲ್ಲಿ ಓಣಂ ಹಬ್ಬದ ಆಚರಣೆ ಮಂಗಳವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು. ಅಪರ ಜಿಲ್ಲಾಧಿಕಾರಿ ಸೂಫಿಯಾನ್ ಅಹಮದ್ ಸಮಾರಂಭ ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ವೃದ್ಧಾಶ್ರಮದಿಂದ ಪರವನಡ್ಕ ಪೇಟೆಯ ವರೆಗೆ ವೃದ್ಧಮಂದಿರದ ಸದಸ್ಯರನ್ನೊಳಗೊಂಡ ಮೆರವಣಿಗೆ ನಡೆಯಿತು. ಮಹಾಬಲಿ ಚಕ್ರವರ್ತಿಯ ವೇಷಧಾರಿ, ಬ್ಯಾಂಡ್ ಮೇಳ ಹಾಗೂ ಜಾನಪದ ಕಲಾ ಪ್ರಕಾರಗಳು, ಚೆಮ್ಮನಾಡ್ ಸಿ.ಡಿ.ಎಸ್ಬ್ಯಾಂಡ್ ಮೇಳ, ತಿರುವಾತಿರ, ಕೋಲ್ಕಳಿ, ಒಪ್ಪನ, ಜಾನಪದ ಹಾಡು, ಸಮೂಹ ನೃತ್ಯ ಮುಂತಾದವುಗಳು ನೆರವಣಿಗೆಗೆ ಮೆರುಗು ನೀಡಿತು.
ಓಣಂ ಅಂಗವಾಗಿ ವೃದ್ಧಾಶ್ರಮಕ್ಕೆ ಹಲವು ಮಂದಿ ದಾನಿಗಳು ಮತ್ತು ಸಂಘ ಸಂಸ್ಥೆಗಳು ಪ್ರಾಯೋಜಿಸಿರುವ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಉಪಶಾಮಕ ಆರೈಕೆ ಸಲಕರಣೆಗಳನ್ನು ಅಪರ ಜಿಲ್ಲಾಧಿಕಾರಿ ವೃದ್ಧಾಶ್ರಮ ಅಧೀಕ್ಷಕ ಬಿ.ಮೋಹನನ್ ಅವರಿಗೆ ಹಸ್ತಾಂತರಿಸಿದರು.
ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಎ. ಸೈಮಾ ಅಧ್ಯಕ್ಷತೆ ವಹಿಸಿದ್ದರು. ಚೆಮ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಫೈಜಾ ಅಬೂಬಕರ್ ಮುಖ್ಯ ಭಾಷಣ ಮಾಡಿದರು. ಕುಟುಂಬಶ್ರೀ ಮಿಷನ್ ಜಿಲ್ಲಾ ಸಂಯೋಜಕ ಟಿ.ಟಿ.ಸುರೇಂದ್ರನ್ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಬದರುಲ್ ಮುನೀರ್, ಚೆಮ್ಮನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಬ್ರಾಹಿಂ ಮನ್ಸೂರ್ ಕುರಿಕ್ಕಲ್ ಮೊದಲಾದವರು ಉಪಸ್ಥಿತರಿದ್ದರು. ವೃದ್ಧಾಶ್ರಮ ಅಧೀಕ್ಷಕ ಬಿ.ಮೋಹನನ್ ಸ್ವಾಗತಿಸಿದರು. ಚೆಮ್ನಾಡು ಗ್ರಾಮ ಪಂಚಾಯತ್ ಸಿಡಿಎಸ್ ಅಧ್ಯಕ್ಷೆ ಮುಮ್ತಾಜ್ ಅಬೂಬಕರ್ ವಂದಿಸಿದರು.