ಲಖನೌ: ವಿಧಾನಸಭೆಯಲ್ಲಿ ಶಾಸಕರ ವರ್ತನೆ, ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.
ಹೊಸ ನಿಯಮಗಳ ಪ್ರಕಾರ, ಶಾಸಕರು ಸದನದಲ್ಲಿ ದಾಖಲೆಗಳನ್ನು ಹರಿಯುಂತಿಲ್ಲ. ಮೊಬೈಲ್ ಫೋನ್ ಒಯ್ಯುವಂತಿಲ್ಲ. ಭಾಷಣ ಮಾಡುವಾಗ ಗ್ಯಾಲರಿಯಲ್ಲಿ ಯಾರನ್ನಾದರೂ ತೋರಿಸುವುದಾಗಲೀ, ಹೊಗಳುವುದಾಗಲೀ ಮಾಡುವಂತಿಲ್ಲ.
ಮೊಗಸಾಲೆಯಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ. ಜೋರಾಗಿ ಮಾತನಾಡುವಂತಿಲ್ಲ, ನಗುವಂತಿಲ್ಲ ಹಾಗೂ 'ಈ ನಿಯಮಗಳಿಗೆ ಸಂಬಂಧಿಸಿದ 'ಉತ್ತರ ಪ್ರದೇಶ ವಿಧಾನಸಭೆಯ ಕಾರ್ಯವಿಧಾನಗಳು ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳು-2023' ಅನ್ನು ಸೋಮವಾರ ಮಂಡಿಸಲಾಗಿದೆ. ಬುಧವಾರ ಅದು ಚರ್ಚೆಗೆ ಬರಲಿದ್ದು ನಂತರ ಅಂಗೀಕಾರವಾಗಲಿದೆ' ಎಂದು ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್ ಸತೀಶ್ ಮಹಾನಾ ಪಿಟಿಐಗೆ ತಿಳಿಸಿದ್ದಾರೆ.
ಯಾವುದೇ ರೀತಿಯ ಬರಹ, ಪ್ರಶ್ನೋತ್ತರ, ಪುಸ್ತಕ ಅಥವಾ ಪತ್ರಿಕಾ ಹೇಳಿಕೆಗಳನ್ನು ಸದನಕ್ಕೆ ಕೊಂಡೊಯ್ಯಲು ಮತ್ತು ಅಲ್ಲಿ ಅದನ್ನು ವಿತರಿಸಲು ನಿಷೇಧ ವಿಧಿಸುವ ಪ್ರಸ್ತಾವ ಹೊಸ ನಿಯಮಾವಳಿಗಳಲ್ಲಿದೆ.