ಪುಣೆ (PTI): ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ರಾಜಕೀಯ ಭಿನ್ನಾಭಿಪ್ರಾಯ ಮರೆತು ಮಂಗಳವಾರ ಇಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಪವಾರ್ ಅವರು ಮೋದಿಯವರ ಬೆನ್ನುತಟ್ಟಿ, ಅವರ ಜೊತೆ ತಮಾಷೆಯಾಗಿ ಮಾತನಾಡಿದರು.
ಉಭಯ ನಾಯಕರ ಈ ಸಂಭ್ರಮದ ಕುಶಲೋಪರಿಗೆ ಪವಾರ್ ಅವರ ಸೋದರ ಸಂಬಂಧಿ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಹಲವು ಮುಖಂಡರು ಸಾಕ್ಷಿಯಾದರು.
ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ ಈ ಸನ್ನಿವೇಶಕ್ಕೆ ವೇದಿಕೆಯಾಯಿತು. ಎನ್‌ಸಿಪಿ ವಿಭಜನೆಯಾದ ನಂತರ ಮೋದಿ ಮತ್ತು ಪವಾರ್ ಅವರ ಮೊದಲ ಭೇಟಿ ಇದಾಗಿದೆ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಶರದ್ ಪವಾರ್ ಅವರಿಗೆ ಹಸ್ತಲಾಘವ ನೀಡಿದರು. ಆದರೆ, ಈ ಅವಕಾಶವನ್ನು ಬಳಸಿಕೊಳ್ಳಲು ಹೋಗದ ಅಜಿತ್ ಪವಾರ್ ಹಾಗೇ ಮುಂದೆ ಹೆಜ್ಜೆ ಹಾಕಿದರು.
ಮೋದಿ ಅವರ 'ಉನ್ನತ ನಾಯಕತ್ವ' ಹಾಗೂ 'ನಾಗರಿಕರಲ್ಲಿ ಅವರು ದೇಶಪ್ರೇಮದ ಭಾವನೆಯನ್ನು ಜಾಗೃತಗೊಳಿಸಿರುವುದನ್ನು' ಪರಿಗಣಿಸಿ 'ಲೋಕಮಾನ್ಯ ತಿಲಕ್' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಾಲಗಂಗಾಧರ ತಿಲಕ್ ಅವರ ಪುಣ್ಯತಿಥಿಯಂದು ಪ್ರತಿವರ್ಷವು ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಪ್ರಧಾನಿ ಮೋದಿ ಅವರ ಕಾಲೆಳೆದ ಪವಾರ್ ಅವರು, 'ಶಿವಾಜಿ ಮಹಾರಾಜರು ಎಂದಿಗೂ ಮತ್ತೊಬ್ಬರ ನೆಲವನ್ನು ಕಸಿದುಕೊಂಡಿರಲಿಲ್ಲ ಎಂದರು. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಬಿ ವಿಭಜನೆಯಲ್ಲಿ ಬಿಜೆಪಿಯ ಪಾತ್ರವಿದೆ' ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಯು ಗಮನಸೆಳೆಯಿತು.
ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಈ ಕಾರ್ಯಕ್ರಮದಿಂದ ದೂರವಿರಬೇಕು ಎಂದು 'ಇಂಡಿಯಾ' ಮುಖಂಡರು ಶರದ್ ಪವಾರ್ ಅವರನ್ನು ಈ ಹಿಂದೆ ಒತ್ತಾಯಿಸಿದ್ದರು. ಆದರೆ ಪವಾರ್ ಇದಕ್ಕೆ ಸ್ಪಂದಿಸಲಿಲ್ಲ.
ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ವಿಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಹೋರಾಟಕ್ಕೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ ವೇದಿಕೆ ಹಂಚಿಕೊಳ್ಳುವುದು ಸರಿಯಲ್ಲ ಎಂದು ವಿವಿಧ ಮುಖಂಡರು ಪ್ರತಿಪಾದಿಸಿದ್ದರು.