ನವದೆಹಲಿ: ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಹೆಚ್ಚಳ, ಹೋಟೆಲ್, ರೆಸಾರ್ಟ್‌ಗಳ ಅಕ್ರಮ ನಿರ್ಮಾಣವು ಹಿಮಾಲಯದ ಶ್ರೇಣಿಯಲ್ಲಿಯ ಸ್ವಾಭಾವಿಕ ಸಂಪನ್ಮೂಲವನ್ನು ಶಿಥಿಲಗೊಳಿಸುತ್ತಿದೆ. ಜೋಶಿಮಠದಂಥ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸರ್ಕಾರವು ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಸತ್ತಿನ ಸ್ಥಾಯಿ ಸಮಿತಿ ಗುರುವಾರ ತಿಳಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರ ನೇತೃತ್ವದ 31 ಸದಸ್ಯರ 'ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಹಾಗೂ ಜಾಗತಿಕ ತಾಪಮಾನ'ಕ್ಕೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯು ತನ್ನ 135ನೇ ವರದಿಯನ್ನು ರಾಜ್ಯಸಭೆ ಎದುರಿಟ್ಟಿತು. ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಎಂದು ಪರಿಗಣಿಸಲ್ಪಟ್ಟಿರುವ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ಸ್ಥಳೀಯ ಆಡಳಿತಗಳ ಸಹಯೋಗದಿಂದಿಗೆ ಪರಿಶೀಲನೆಗೆ ಒಳಪಡಿಸಬೇಕು. ಕಟ್ಟಡಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರವಾಸೋದ್ಯಮ ಚಟುವಟಿಕೆಗಳು ಮಿತಿಮೀರಿ ಹೆಚ್ಚಾಗಿರುವುದನ್ನೂ ಸಮಿತಿ ಎತ್ತಿ ತೋರಿಸಿದೆ. ಈ ಚಟುವಟಿಕೆಗಳಿಂದ ಸ್ವಾಭಾವಿಕ ಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಪರಿಸರ ಸಚಿವಾಲಯವು ವಾಸ್ತವಿಕವಾದ ಮತ್ತು ಜರುಗಿಸಬಹುದಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದೆ.