ಗುವಾಹಟಿ: ನಗ್ನ ಮೆರವಣಿಗೆಯ ಹೇಯಕೃತ್ಯ ತಡೆಯುವಲ್ಲಿ ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಯನ್ನು ಮಣಿಪುರ ಸರ್ಕಾರವು ಅಮಾನತುಗೊಳಿಸಿದೆ.
ಕೆ. ಪ್ರೇಮಕುಮಾರ್ ಮಂಗ್ಯಾಂಗ್ ಅಮಾನತುಗೊಂಡರು. ತೌಬಲ್ ಜಿಲ್ಲೆಯ ನಾಂಗ್ಪೋಕ್ ಸೆಕ್ಮೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ.
ಅಧಿಕಾರಿಯನ್ನು ಅಮಾನತುಗೊಳಿಸಿರುವ ಸುದ್ದಿ ತಿಳಿದ ಮೈತೇಯಿ ಸಮುದಾಯದ ನೂರಾರು ಮಹಿಳೆಯರು ಪೊಲೀಸ್ ಠಾಣೆಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರದಂತೆ ಠಾಣೆಯ ಮುಂಭಾಗದ ರಸ್ತೆಗಳಲ್ಲಿ ಮರಳು ಚೀಲಗಳ ರಾಶಿ ಹಾಕಿದ್ದಾರೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ.
ಮುಂಜಾಗ್ರತೆಯಾಗಿ ಈ ಠಾಣೆಯ ಬಳಿ ಹೆಚ್ಚುವರಿಯಾಗಿ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ.
ಪರಿಸ್ಥಿತಿ ನಿಯಂತ್ರಿಸುವಲ್ಲಿ ಶಾಸಕರು ಸೋತಿದ್ದಾರೆ. ಹಾಗಾಗಿ, ಅಧಿಕಾರಿಯ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ ಶಾಸಕರಿಂದಲೂ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆ: ಮಣಿಪುರ-ಮ್ಯಾನ್ಮರ್ ಗಡಿ ಭಾಗದ ಮೊರೆಹ್ ಪಟ್ಟಣಕ್ಕೆ ರಕ್ಷಣಾ ಪಡೆಗಳನ್ನು ನಿಯೋಜಿಸಿರುವುದಕ್ಕೆ ಕುಕಿ-ಜೋ ಸಮುದಾಯದಿಂದ ಪ್ರತಿಭಟನೆ ಮುಂದುವರಿದಿದೆ.