ಅಮೆರಿಕದ ನಾಸಾ ಬಿಡುಗಡೆ ಮಾಡಿರುವ ಮಾಹಿತಿಯಂತೆ ೧೮೮೦ರಿಂದ ಇತ್ತೀಚಿನವರೆಗೆ ಇದೇ ಜುಲೈ ತಿಂಗಳು ಸಾಗರಗಳು ಅತ್ಯಧಿಕ ತಾಪಮಾನದಿಂದ ಕೂಡಿದ್ದವು. ಇದುವರೆಗಿನ ಮುಂಗಾರು ಮಳೆಯನ್ನು ಅವಲೋಕನ ಮಾಡಿದರೆ ಯಾಕೋ ಖಾರಿಫ್ ಬೆಳೆಗಳು (ಮುಂಗಾರು ಮಳೆ ಆಧಾರಿತ ಬೆಳೆಗಳು) ಸಂಪೂರ್ಣವಾಗಿ ಕೈಕೊಟ್ಟಂತೆ ಕಾಣಿಸುತ್ತಿದೆ!
ಉತ್ತರ ಅಟ್ಲಾಂಟಿಕ್ ಮತ್ತು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಚಂಡಮಾರುತಗಳು ಹೆಚ್ಚು ಉದ್ಭವಿಸುತ್ತಿವೆ. ಜಾಗತಿಕ ತಾಪಮಾನ ೨ ಡಿಗ್ರಿ ಸೆಲ್ಸಿಯಸ್ ಏರಿಕೆಯೊಂದಿಗೆ ಉಷ್ಣವಲಯದ ಚಂಡಮಾರುತಗಳಲ್ಲಿ ಶೇ. +೧೩ ಏರಿಕೆಯಾಗಿ ಕ್ಯಾಟಗಿರಿ ೪ ಅಥವಾ ೫ನೇ ಹಂತದ ಚಂಡಮಾರುತಗಳು (ಅತ್ಯಂತ ಅಪಾಯಕಾರಿ) ಘಟಿಸುತ್ತಿವೆ. ಗ್ರೀನ್‌ಲ್ಯಾಂಡ್‌ನಲ್ಲಿ ವರ್ಷಕ್ಕೆ ಸುಮಾರು ೧೫೦ ಬಿಲಿಯನ್ ಟನ್ನುಗಳಷ್ಟು ಹಿಮಪದರುಗಳು ಕರಗಿಹೋಗುತ್ತಿವೆ. ಇದು ಸಮುದ್ರ ಮಟ್ಟ ಹೆಚ್ಚುವುದಕ್ಕೆ ಕಾರಣವಾಗಿದ್ದು ತಟದಲ್ಲಿರುವ ನಗರಗಳು ಮುಳುಗಲು ಪ್ರಾರಂಭಿಸಿವೆ. ಸರಾಸರಿ ಒಂದು ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಿದಂತೆ ಶೇ. ೭ ನೀರನ್ನು ಮೋಡಗಳು ಹಿಡಿದಿಟ್ಟುಕೊಳ್ಳುತ್ತವೆ. ಕೆಲವು ಪ್ರದೇಶಗಳಲ್ಲಿ ಮೇಘಸ್ಫೋಟಗಳಿಂದ ದಿನಕ್ಕೆ ನೂರು ಇನ್ನೂರು ಮಿಲಿಮೀಟರುಗಳಷ್ಟು ಮಳೆ ಸುರಿಯುತ್ತಿದ್ದು ಬೆಟ್ಟಗುಡ್ಡಗಳು ಕುಸಿದುಹೋಗಿ ಪ್ರವಾಹಗಳು ಎಲ್ಲವನ್ನೂ ಕೊಚ್ಚಿಕೊಂಡು ಸಾಗುತ್ತಿವೆ. ಜನಸಾಮಾನ್ಯರ ದಿನನಿತ್ಯದ ಬದುಕು ಅಪಾಯಕ್ಕೆ ಸಿಲುಕಿಕೊಂಡಿದೆ. ಇದರ ಜೊತೆಗೆ ವೈರಸ್-ಬ್ಯಾಕ್ಟೀರಿಯಾಗಳು ಸಕ್ರಿಯಗೊಂಡು ಅನೇಕ ಕಾಯಿಲೆಗಳು ಸೃಷ್ಟಿಯಾಗುತ್ತಿವೆ.
ಪ್ರಾಥಮಿಕ ಹವಾಮಾನ ಪರಿಸ್ಥಿತಿಗಳ ಸಂಯೋಜನೆಯಿಂದಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಚಂಡಮಾರುತಗಳು ತೀವ್ರಗತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಇವುಗಳಲ್ಲಿ ಮುಖ್ಯವಾಗಿ ಬೆಚ್ಚಗಿನ ಸಮುದ್ರ ಮೇಲ್ಮೈ ತಾಪಮಾನ, ಹೆಚ್ಚಿನ ತೇವಾಂಶದ ಮಟ್ಟ ಮತ್ತು ವಾತಾವರಣದ ಅಸ್ಥಿರತೆ ಸೇರಿವೆ, ಜೊತೆಗೆ ವಾರ್ಷಿಕ ಹವಾಮಾನ ವೈಪರೀತ್ಯಗಳು. ಭೂಮಿ ದುಂಡಾಗಿರುವುದರಿಂದ ಎರಡೂ ಧ್ರುವಗಳು ಸೂರ್ಯನ ಓರೆಯಾದ ಕಿರಣಗಳನ್ನು ಪಡೆಯುತ್ತವೆ; ಪರಿಣಾಮ ಧ್ರುವಗಳಲ್ಲಿ ತಾಪಮಾನ ಕಡಿಮೆ ಇದ್ದು ತಣ್ಣನೆ ವಾತಾವರಣ ಇರುತ್ತದೆ. ಇನ್ನು ಭೂಮಿಯ ಸಮಭಾಜಕ ವೃತ್ತದ ಎರಡೂ ಕಡೆ ಇರುವ ಉಷ್ಣವಲಯಗಳು ಸೂರ್ಯನ ನೇರ ಅಥವಾ ಲಂಬವಾದ ಕಿರಣಗಳನ್ನು ಪಡೆಯುವುದರಿಂದ ಹೆಚ್ಚು ಶಾಖ ಪಡೆಯುತ್ತವೆ. ಸಮುದ್ರದ ಮೇಲ್ಮೈ ತಾಪಮಾನವು ೨೬.೫ ಡಿಗ್ರಿ ಸೆ.ಗಿಂತ ಹೆಚ್ಚಾಗುತ್ತಿದ್ದಂತೆ ವಾಯುಭಾರ ಕುಸಿತಗೊಂಡು ಚಂಡಮಾರುತಗಳು ಸೃಷ್ಟಿಯಾಗುತ್ತವೆ.
ಮೊದಲನೆಯದು ಹೆಚ್ಚಿನ ಒತ್ತಡದ ಗಾಳಿ ತಂಪಾಗಿದ್ದರೆ, ಕಡಿಮೆ ಒತ್ತಡದ ಗಾಳಿ ಬೆಚ್ಚಗಿರುತ್ತದೆ. ಎರಡನೆಯದು ಬೆಚ್ಚಗಿನ ಗಾಳಿ ಮೇಲ್ಮುಖ ದಿಕ್ಕಿನಲ್ಲಿ ಚಲಿಸುತ್ತದೆ ಮತ್ತು ಮೂರನೆಯದು ಹೆಚ್ಚಿನ ಒತ್ತಡದಿಂದ ಗಾಳಿ ಕಡಿಮೆ ಒತ್ತಡದ ಕಡೆಗೆ ಹರಿಯುತ್ತದೆ. ವಾಸ್ತವವಾಗಿ ಹೆಚ್ಚಿನ ಒತ್ತಡದ ಶೀತಗಾಳಿಯು ಕಡಿಮೆ ಒತ್ತಡದ ಕಡೆಗೆ ಹರಿದಾಗ, ಶೀತಗಾಳಿ ಬೆಚ್ಚಗಿನ ಗಾಳಿಯಾಗಿ ಮಾರ್ಪಟ್ಟು ತೇವಾಂಶದೊಂದಿಗೆ ಮೇಲ್ಮುಖವಾಗಿ ಚಲಿಸುತ್ತದೆ. ಇದರ ಪರಿಣಾಮ ಮೋಡಗಳು ರಚನೆಯಾಗುತ್ತವೆ. ಕಡಿಮೆ ಒತ್ತಡದ ಗಾಳಿಯಿಂದ ಸೃಷ್ಟಿಯಾದ ಶೂನ್ಯವನ್ನು ತುಂಬಲು ಹೆಚ್ಚಿನ ಒತ್ತಡದ ಗಾಳಿಯು ಚಕ್ರಗಳಲ್ಲಿ ಪರಿಚಲನೆಗೊಳ್ಳುತ್ತ ಚಂಡಮಾರುತ ವಿಶಾಲವಾಗಿ ಬೆಳೆಯುತ್ತಾ ಹೋಗುತ್ತದೆ. ಕೊನೆಗೆ ಚಂಡಮಾರುತ ಕಡಲದಂಡೆಗೆ ಹತ್ತಿರವಾದಂತೆ ತೇವಾಂಶದ ಪೂರೈಕೆ ಕಡಿಮೆಯಾಗಿ ತೀವ್ರತೆ ಕಳೆದುಕೊಳ್ಳುತ್ತದೆ. ಅಷ್ಟರಲ್ಲಿ ಚಂಡಮಾರುತ ಕಡಲ ದಂಡೆಯಿಂದ ನೂರಾರು ಕಿ.ಮೀ.ಗಳ ದೂರ ಚಲಿಸಿ ಸಾಕಷ್ಟು ನಷ್ಟವನ್ನು ಉಂಟುಮಾಡಿರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಚಂಡಮಾರುತಗಳು ಒಂದೇಸಮನೆ ಉದ್ಭವಿಸುತ್ತ ಭಾರತೀಯ ಪರ್ಯಾಯ ದ್ವೀಪದ ಮೇಲೆ ದಾಳಿ ನಡೆಸುತ್ತಿವೆ. ಹಿಂದೂಮಹಾಸಾಗರ, ಅರಬಿಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ನಿರಂತರವಾಗಿ ಚಂಡಮಾರುತಗಳು ಒಂದರ ಹಿಂದೆ ಒಂದು ರೈಲು ಬೋಗಿಗಳಂತೆ ಎದ್ದು ಬರುತ್ತಲೇ ಇರುತ್ತವೆ. ಕಳೆದ ಎರಡುಮೂರು ವರ್ಷಗಳಿಂದ ಚಂಡಮಾರುತಗಳು ಯಾವ ಕಾಲದಲ್ಲಿ ಸಮುದ್ರಗಳಿಂದ ಎದ್ದು ಬರುತ್ತವೆ ಎನ್ನುವುದು ಯಾವ ಪವನಶಾಸ್ತ್ರಜ್ಞರಿಗೂ ಅರ್ಥವಾಗದೆ ಹೋಗಿದೆ. ಕೆಲವೊಮ್ಮೆ ತಿಂಗಳುಗಟ್ಟಲೆ ಮಳೆ ಸುರಿದರೆ, ಅದೇ ರೀತಿ ತಿಂಗಳುಗಟ್ಟಲೇ ಮಾಯವಾಗಿ ಹೋಗುತ್ತದೆ. ಲಕ್ಷಾಂತರ ವರ್ಷಗಳಿಂದ ಕಾಲಕಾಲಕ್ಕೆ ಬರುತ್ತಿದ್ದ ಮುಂಗಾರು ಮಳೆಯ ಮೋಡಗಳು ಈ ವರ್ಷ 'ಎಲ್ ನಿನೊ'ದಿಂದ ತೊಂದರೆಗೆ ಸಿಲುಕಿಕೊಂಡವು. ದಕ್ಷಿಣ ಸಮಭಾಜಕವೃತ್ತದ ಸಮುದ್ರಗಳಲ್ಲಿ ಉಂಟಾಗುವ ಅಲೆಗಳ ತೂಗಾಟ (ಆಸಿಲೇಷನ್) ಮತ್ತು ಸಾಗರಗಳ ತಾಪಮಾನ ಏರಿಕೆಯನ್ನು ಎಲ್ ನಿನೋ ಎಂದು ಕರೆಯಲಾಗುತ್ತದೆ. ಇದು ೯ರಿಂದ ೧೨ ತಿಂಗಳುಗಳವರೆಗೂ ಇರುತ್ತದೆ.
ನಾಸಾ ಸಂಶೋಧನೆ
ಅಮೆರಿಕದ ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಆಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್') ದ ಸಾಗರ ಪರಿಚಲನೆ ಮತ್ತು ಹವಾಮಾನ ಅಂದಾಜು, ದತ್ತಾಂಶದ ಪ್ರಕಾರ ೧೯೯೨ರಿಂದ ಸಾಗರದ ಶಾಖ ತೀವ್ರವಾಗಿ ಹೆಚ್ಚಾಗುತ್ತಿದೆ. ದತ್ತಾಂಶಗಳನ್ನು ಉಪಗ್ರಹಗಳಲ್ಲಿ ಮತ್ತು ಸಮುದ್ರಗಳ ಆಳದಲ್ಲಿ ಅಳವಡಿಸಿದ ಉಪಕರಣಗಳಿಂದ ಪಡೆಯಲಾಗುತ್ತಿದೆ.
ಇದರ ಆದಾರದ ಮೇಲೆ ಹೇಳುವುದಾದರೆ, ೯೦ ಪ್ರತಿಶತ ಜಾಗತಿಕ ತಾಪಮಾನದ ಸಾಗರಗಳಲ್ಲಿ ಸಂಭವಿಸುತ್ತಿದೆ. ೧೯೫೫ರಿಂದ ೨೦೨೦ರ ವರೆಗಿನ ವಾರ್ಷಿಕ ತಾಪಮಾನದ ಬದಲಾವಣೆ ಮತ್ತು ೨,೦೦೦ ಮೀಟರುಗಳ ಆಳದವರೆಗಿನ ಸಾಗರಗಳ ತಾಪಮಾನವನ್ನು ಚಾರ್ಟ್‌ನಲ್ಲಿ ತೋರಿಸಲಾಗಿದ್ದು, ಸಾಗರಗಳಲ್ಲಿ ಸಂಗ್ರಹವಾಗುವ ಶಾಖವು ಅದರ ಶಕ್ತಿಯನ್ನು ವಿಸ್ತರಿಸಲು ಕಾರಣವಾಗಿದೆ. ಇದು ಜಾಗತಿಕ ಸಮುದ್ರಮಟ್ಟ ಏರಿಕೆಯ ಮೂರನೇ ಒಂದು ಭಾಗದಿಂದ ಅರ್ಧದಷ್ಟು ಕಾರಣವಾಗಿದೆ. ಸಮುದ್ರದ ೭೦೦ ಮೀಟರುಗಳ ಮೇಲ್ಮೈಯಲ್ಲಿ ಹೆಚ್ಚಿನ ಶಕ್ತಿ ಸಂಗ್ರವಾಗುತ್ತಿದ್ದು, ೧,೮೦೦ರಿಂದ ಸಾಗರಗಳ ತಾಪಮಾನ ಏರಿಕೆ ಪ್ರಾರಂಭವಾಗಿ ಕಳೆದ ದಶಕ (೨೦೧೦-೨೦೨೦) ಗರಿಷ್ಠ ಏರಿಕೆಯನ್ನು ಕಂಡಿದೆ. ೨೦೨೨ನೇ ವರ್ಷ ಅತ್ಯಂತ ಬೆಚ್ಚಗಿನ ವರ್ಷವಾಗಿದ್ದು ಸಾಗರಮಟ್ಟವೂ ಅತಿಹೆಚ್ಚು ಏರಿಕೆಯಾಗಿದೆ.
ಭೂಮಿಯ ಶೇ. ೭೦ಕ್ಕಿಂತ ಹೆಚ್ಚಿನ ಭಾಗವನ್ನು ಆವರಿಸಿಕೊಂಡಿರುವ ಸಾಗರಗಳು ಇಡೀ ಭೂಮಂಡಲದ ತಾಪಮಾನವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದು ಅಪಾರವಾಗಿ ಬಿಡುಗಡೆಯಾಗುತ್ತಿರುವ ಶಾಖೋತ್ಪನ್ನ ಅನಿಲಗಳು ಇದಕ್ಕೆ ಕಾರಣವಾಗಿವೆ. ವಿಶೇಷವೆಂದರೆ ಈ ತಾಪಮಾನದ ಏರಿಕೆಯ ಶೇ. ೯೦ ಅನ್ನು ಸಮುದ್ರಗಳು ಹೀರಿಕೊಳ್ಳುತ್ತಿದ್ದು, ಭೂಮಿಯಲ್ಲಿ ಉತ್ಪತ್ತಿಯಾಗುತ್ತಿರುವ ಹೆಚ್ಚು ಶಾಖ ಸಾಗರಗಳ ಕೆಲವು ಮೀಟರುಗಳ ಮೇಲ್ಮೈಯಲ್ಲಿ ಸಂಗ್ರಹಗೊಳ್ಳುತ್ತಿದೆ.
ಪರಿಣಾಮ ಶಾಖದ ವಿಸ್ತರಣೆ, ಸುಂದರ ಹವಳ ದಿಬ್ಬಗಳ ಬ್ಲೀಚಿಂಗ್, ಧ್ರುವಗಳಲ್ಲಿನ ಹಿಮಪದರುಗಳ ತ್ವರಿತ ಕರಗುವಿಕೆ, ತೀವ್ರವಾದ ಚಂಡಮಾರುತಗಳ ಸೃಷ್ಟಿ, ಸಾಗರಗಳ ಆರೋಗ್ಯ ಮತ್ತು ಜೀವರಸಾಯನಶಾಸ್ತ್ರದಲ್ಲಿನ ಬದಲಾವಣೆಗಳು ವೇಗವಾಗಿ ಘಟಿಸುತ್ತಿವೆ. ಚಂಡಮಾರುತಗಳಂತೂ ಗೊತ್ತುಗುರಿ ಇಲ್ಲದೆ ಎದ್ದುಬರುತ್ತಿವೆ. ಪ್ರಸಕ್ತ ಯಾವುದೇ ಪವನ ತಂತ್ರಜ್ಞಾನ, ಪವನಶಾಸ್ತ್ರಜ್ಞರು ಯಾವುದೇ ನಿಖರವಾದ ಮಾಹಿತಿಯನ್ನು ನೀಡಲಾರದ ಮಟ್ಟಕ್ಕೆ ಸಮುದ್ರಗಳು ಪ್ರವರ್ತಿಸುತ್ತಿವೆ.
ಸಾಗರಗಳ ಮೇಲ್ಮೈ ಕೆಳಗೆ ಸಂಗ್ರಹವಾಗುತ್ತಿರುವ ಶಾಖ ಚಂಡಮಾರುತಗಳಿಗೆ ಇಂಧನವನ್ನು ಒದಗಿಸುತ್ತಿದ್ದು ಚಂಡಮಾರುತಗಳ ತೀವ್ರತೆಯ ಮೇಲೆ ಅಪಾರ ಪರಿಣಾಮ ಬೀರುತ್ತಿದೆ. ಈಗ ಜಗತ್ತಿನಾದ್ಯಂತ ಘಟಿಸುತ್ತಿರುವ ನೆರೆ/ಪ್ರವಾಹಗಳಿಗೆ ಇದೇ ಮೂಲಕಾರಣವಾಗಿದೆ. ನಾಸಾ ಸ್ಥಾಪಿಸಿರುವ ಸೆಂಟಿನಲ್ -೬ ಮಥಕೆಲ್ ಫ್ರಿಲಿಚ್ ಮಿಷಿನ್ ಸೇರಿದಂತೆ ೧೯೯೦ರ ದಶಕದಲ್ಲಿ ಆರಂಭಿಸಿದ ಉಪಗ್ರಹ ಆಲ್ಟಿಮೆಟ್ರಿ ಕಾರ್ಯಾಚರಣೆಗಳಿಂದ ಸಮುದ್ರದ ಮೇಲ್ಮೈ ಎತ್ತರದಿಂದ ಪಡೆದ ಸಾಗರ ಶಾಖದ ದತ್ತಾಂಶವನ್ನು ನಾಸಾ ಒದಗಿಸುತ್ತಿದೆ.
೨೦೨೨ರಲ್ಲಿ ಉದ್ಭವಿಸಿದ ೧೩೬ ವಾಯುಭಾರ ಕುಸಿತಗಳಲ್ಲಿ ೧೨ ಭೀಕರ ಚಂಡಮಾರುತಗಳಾಗಿ ಪರಿಣಮಿಸಿ ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳಿಗೆ ಅಪ್ಪಳಿಸಿದ್ದವು. ೨೦೨೩ರಲ್ಲಿ ಕನಿಷ್ಠ ಹತ್ತು ಭೀಕರ ಚಂಡಮಾರುತಗಳು ನಾಲ್ಕಾರು ತಿಂಗಳು ಕಾಲ ಒಂದರ ಹಿಂದೆ ಒಂದರಂತೆ ದೇಶದ ಕರಾವಳಿಗಳಿಗೆ ಅಪ್ಪಳಿಸಿದವು. ಒಂದು ಚಂಡಮಾರುತ ಬಂದುಹೋಗಿ ಸ್ವಲ್ಪ ದಿನಗಳು ಸುಧಾರಿಸಿಕೊಂಡಿದ್ದೆ ತಡ, ಹಿಂದೆಯೇ ಮತ್ತೊಂದು ಚಂಡಮಾರುತ ಎದ್ದು ಬರುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದ ಇದು ನಿರಂತರವಾಗಿ ನಡೆಯುತ್ತಲೇ ಇದೆ. ರೈತರ ಬೆಳೆಗಳು ಕೈಗೆ ಬಂದಿದ್ದು ಬಾಯಿಗೆ ಬರದೆ ಹೋಗಿವೆ. ಪ್ರವಾಹಗಳಿಂದ ಬಡವರು ನೆಮ್ಮದಿಯಾಗಿ ನಿದ್ದೆ ಮಾಡುವುದೇ ದುಸ್ತರವಾಗಿಹೋಗಿದೆ. ಇನ್ನು ಕೇಂದ್ರ ಸರಕಾರ, ರಾಜ್ಯ ಸರಕಾರದ ಶಾಸಕರು ಹೆಲಿಕಾಪ್ಟರ್‌ಗಳಲ್ಲಿ ಹಾರಾಟ ಮಾಡಿ ಆಕಾಶದಲ್ಲೇ ಪರಿಹಾರ ಘೋಷಿಸುತ್ತಾರೆ. ಆದರೆ ಅದು ಭೂಮಿಯಲ್ಲಿ ಜನರ ಕೈಸೇರುವುದು ಮಾತ್ರ ಪವಾಡವೇ ಆಗಿದೆ.
ಇತ್ತೀಚಿನ ವರ್ಷಗಳಲ್ಲಿ ಅರಬ್ಬಿ ಸಮುದ್ರ ಹೆಚ್ಚಿನ ಚಂಡಮಾರುತಗಳಿಗೆ ಕೇಂದ್ರಬಿಂದುವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ನಡೆದ ಅರಣ್ಯನಾಶದಿಂದ ಪರಿಸರ ವ್ಯವಸ್ಥೆಗಳು ಸಂಪೂರ್ಣವಾಗಿ ನಾಶಗೊಂಡು ಚಂಡಮಾರುತಗಳು ಉದ್ಭವಿಸುತ್ತಿವೆ. ಕಳೆದ ಎರಡುಮೂರು ತಿಂಗಳಲ್ಲಿ ಇಡೀ ಭಾರತ ಪ್ರವಾಹಗಳಿಂದ ತತ್ತರಿಸಹೋಗಿದೆ. ವಿಶೇಷವಾಗಿ ಉತ್ತರಾಖಂಡ, ಹಿಮಾಚಲ ಪ್ರದೇಶ, ಹರ್ಯಾಣ, ಪಂಜಾಬ್, ಗುಜರಾತ್, ಅಸ್ಸಾಮ್, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಹೀಗೆ ಎಲ್ಲಾ ರಾಜ್ಯಗಳು ನೆರೆಗೆ ತುತ್ತಾಗುತ್ತಿವೆ. ಜಾಗತಿಕ ತಾಪಮಾನ ಇದೆಲ್ಲಕ್ಕೂ ಮೂಲ ಕಾರಣವಾಗಿದೆ. ಕಳೆದ ವರ್ಷ 'ತೌಕ್ಟೇ' ಚಂಡಮಾರುತವು ಗುಂಪುಗುಂಪಾಗಿ ಹಲವಾರು ಚಂಡಮಾರುತಗಳನ್ನು ಬ್ಯಾಕ್‌ಟುಬ್ಯಾಕ್ ಕರಾವಳಿಗೆ ಅಪ್ಪಳಿಸಿತ್ತು. ಅರಬಿ ಸಮುದ್ರವನ್ನು ಹಿಂದೆ 'ಚಂಡಮಾರುತ ನಾಚಿಕೆಯ ಸಮುದ್ರ' ಎಂದು ಕರೆಯಲಾಗುತ್ತಿತ್ತು. ಕಾರಣ ಅಲ್ಲಿ ಚಂಡಮಾರುತಗಳು ಅಪರೂಪವಾಗಿ ಸೃಷ್ಟಿಯಾಗುತ್ತಿದ್ದವು. ಆದರೆ ಈಗ ಅರಬಿ ಸಮುದ್ರವೂ ಹೆಚ್ಚು ಚಂಡಮಾರತಗಳನ್ನು ಸೃಷ್ಟಿಸುತ್ತಿದೆ.
ಜಗತ್ತಿನ ಇತರ ಉಷ್ಣವಲಯ ಸಾಗರಗಳಿಗೆ ಹೋಲಿಸಿದರೆ ಅರಬಿ ಸಮುದ್ರದಲ್ಲಿ ತಾಪಮಾನ ಅತ್ಯಂತ ತೀವ್ರವಾಗಿ ಏರುತ್ತಿದೆ ಎಂಬುದಾಗಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದು ಈಗ ೧.೨ ರಿಂದ ೧.೪ ಡಿಗ್ರಿ ಸೆಲ್ಸಿಯಸ್ ಮಧ್ಯ ನಿಂತಿದೆ. ಜಗತ್ತಿನಲ್ಲಿ ತಾಪಮಾನ ನಿಯಂತ್ರಣದ ಯೋಜನೆಗಳು ಯಾವ ರೀತಿಯಲ್ಲೂ ಕಟ್ಟುನಿಟ್ಟಾಗಿ ಜಾರಿಯಾಗದ ಕಾರಣ ವಿಜ್ಞಾನಿಗಳು ಚಿಂತೆಗೀಡಾಗಿದ್ದಾರೆ. ಚಂಡಮಾರುತಗಳು ಎದ್ದುಬರುವ ಪ್ರತಿಯೊಂದು ಸಲವೂ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವುದು ಕಷ್ಟದ ಕೆಲಸವಾಗಿದೆ. ತಾಪಮಾನವನ್ನು ನಿಯಂತ್ರಿಸದೆ ಪರಿಹಾರವನ್ನು ಕಂಡುಕೊಳ್ಳುವುದು ಸುಲಭದ ಕೆಲಸವಲ್ಲ. ಕಳೆದ ಕೆಲವು ದಶಕಗಳಲ್ಲಿ ಭೂಮಿಯ ಉತ್ತರ ಗೋಳ ತಣ್ಣಗಿದ್ದು ದಕ್ಷಿಣಗೋಳ ವಿಪರೀತವಾಗಿ ಬಿಸಿಗೊಂಡಿತ್ತು. ಆದರೆ ಈ ದಶಕ ಅದು ತದ್ವಿರುದ್ಧವಾಗಿದೆ. ಉತ್ತರಗೋಳ ಬಿಸಿಯಿಂದ ತತ್ತರಿಸುತ್ತಿದೆ.
ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋ ನಗರದಲ್ಲಿ ನಡೆದ ಹವಾಮಾನ ಶೃಂಗಸಭೆ ಕೋಪ್-೨೬ರಲ್ಲಿ ಜಗತ್ತಿನ ೨೦೦ ದೇಶಗಳ ೩೦,೦೦೦ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ದೇಶಗಳನ್ನು ನಡೆಸುವ ಮಹಾನ್ ರಾಜಕಾರಣಿಗಳು ಅನೇಕ ನಿಲುವುಗಳನ್ನು ಪ್ರಕಟಿಸಿ ಶಾಖೋತ್ಪನ್ನ ಅನಿಲಗಳನ್ನು ಉರಿಸುವುದರಲ್ಲಿ ಸುಧಾರಣೆಗಳನ್ನು ತರುವುದಾಗಿ ರಾಜಾರೋಷವಾಗಿ ಘೋಷಿಸಿದರು. ಆದರೆ ಕಳೆದ ನಾಲ್ಕಾರು ದಶಕಗಳಿಂದ ಇಂತಹದ್ದೆ ಸಭೆಗಳಲ್ಲಿ ತೆಗೆದುಕೊಂಡ ಯಾವುದೇ ನಿರ್ಣಯಗಳು ಕಾರ್ಯರೂಪಕ್ಕೆ ಬರಲೇ ಇಲ್ಲ. ಫಲಿತಾಂಶ ಜಗತ್ತಿನಾದ್ಯಂತ ಇನ್ನಷ್ಟು ಮತ್ತಷ್ಟು ನೈಸರ್ಗಿಕ ವಿಪತ್ತುಗಳಿಂದ ಸಾವುನೋವುಗಳು ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗುತ್ತಿಲ್ಲ. ಒಟ್ಟಿನಲ್ಲಿ ಜಾಗತಿಕ ತಾಪಮಾನ ಎನ್ನುವುದು ನಾವೇ ಮುಂದೆ ನಿಂತು ನಮ್ಮ ಭೂಮಿ ತಾಯಿಗೆ ಕೊಳ್ಳೆಹಾಕುವ ಕೆಲಸವಾಗಿದೆ.