ಕಣ್ಣೂರು: ಟೌನ್ ಠಾಣೆಯಲ್ಲಿ ಸಿವಿಲ್ ಪೋಲೀಸ್ ಅಧಿಕಾರಿಯೋರ್ವರ ಬುಲೆಟ್ ಕದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಪೋಲೀಸ್ ಅಸೆಂಬ್ಲಿ ಹಾಲ್ ಅಂಗಳದಲ್ಲಿ ಬುಲೆಟ್ ಕಳವು ನಡೆಸಿದ್ದ.
ಸಿವಿಲ್ ಪೋಲೀಸ್ ಅಧಿಕಾರಿ ಗಣೇಶೋತ್ಸವ ಕರ್ತವ್ಯ ಮುಗಿಸಿ ಮನೆಗೆ ತೆರಳಲು ವಾಹನ ನಿಲ್ಲಿಸಿದ್ದ ಸ್ಥಳಕ್ಕೆ ಆಗಮಿಸಿದಾಗ ಕಳ್ಳತನವಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಮೋಟಾರು ವಾಹನ ಇಲಾಖೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳಿಂದ ರತೀಶ್ ಬೈಕ್ ಸಮೇತ ಸಾಗುತ್ತಿರುವ ಚಿತ್ರಣ ಲಭ್ಯವಾಗಿದೆ. ನಕಲಿ ಕೀಲಿಯಿಂದ ಬುಲೆಟ್‍ನ ಬೀಗ ತೆರೆದು ಅಲ್ಲಿಂದ ಪಲಾಯನಗೈದಿದ್ದ. ಬಳಿಕ ಇರ್ಕೂರು ಎಂಬಲ್ಲಿ ಅಡಗಿಸಿಟ್ಟಿದ್ದ ಬೈಕ್ ಪತ್ತೆ ಹಚ್ಚಿ ನಗರ ಠಾಣೆಗೆ ತರಲಾಗಿದೆ. ವಿಚಾರಣೆ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ನೀಡಲಾಗಿದೆ.
ರತೀಶ್ ಕಳೆದ ಆರು ತಿಂಗಳಿಂದ ಇರ್ಕೂರಿನ ಬೇಕರಿಯೊಂದರಲ್ಲಿ ಉದ್ಯೋಗಿ. ಈತನ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡಿನ ಪೋಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳಿವೆ. ಕಣ್ಣೂರಿನಲ್ಲಿ ನಡೆದ ವಿವಿಧ ಕಾರು ಕಳ್ಳತನ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.