ತುಮಕೂರು: ನಟ, ನಿರ್ದೇಶಕ, ರಂಗಕರ್ಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಅವರಿಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲಿದೆ. ನಾಗಾಭರಣ ಅವರ ಜೊತೆಗೆ ತುಮಕೂರು ಮೂಲದ ಸಮಾಜ ಸೇವಕರಾದ ಆರ್.ಎಲ್. ರಮೇಶ್ ಬಾಬು ಎಂಬುವವರಿಗೂ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.
ಈ ಕುರಿತು ಮಾತನಾಡಿದ ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು ಕನ್ನಡ ಚಲನಚಿತ್ರರಂಗದಲ್ಲಿ ನಾಗಾಭರಣ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ತುಮಕೂರು ವಿವಿಯ ಕಲಾ ಕಾಲೇಜಿನಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ನೆರವು ನೀಡುತ್ತಿರುವ ಆರ್.ಎಲ್. ರಮೇಶ್ ಬಾಬು ಅವರಿಗೂ ಸಹ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ತುಮಕೂರು ವಿವಿ ವತಿಯಿಂದ ಗೌರವ ಡಾಕ್ಟರೇಟ್ಗೆ ಆಯ್ಕೆ ಮಾಡಲು ನೇಮಿಸಿದ್ದ ಸಮಿತಿಯ ಶಿಫಾರಸ್ಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಆಗಸ್ಟ್ 7ರಂದು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವ ನಡೆಯಲಿದ್ದು, ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋತ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ. ವೆಂಕಟೇಶ್ವರಲು ತಿಳಿಸಿದ್ದಾರೆ.