ತಿರುವನಂತಪುರ: ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 20 ಬೀದಿನಾಯಿಗಳನ್ನು ಕೊಲ್ಲಲಾಗಿದ್ದು, ಕೆಲವು ನಾಯಿಗಳನ್ನು ಜೀವಂತ ಸಮಾಧಿ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಕೆಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ನಾಯಿ ಕಚ್ಚಿದ ನಾಲ್ಕು ಘಟನೆಗಳು ವರದಿಯಾಗಿವೆ.
ವಿಮಾನ ನಿಲ್ದಾಣದ ಆವರಣದ ಸ್ವಚ್ಛತೆ ನಿರ್ವಹಣೆ ವಹಿಸಿಕೊಂಡಿರುವ ಏಜೆನ್ಸಿಯೊಂದು ನಾಯಿಗಳನ್ನು ದತ್ತು ಪಡೆಯುವವರಿಗೆ ನೀಡುವುದಾಗಿ ಅಧಿಕಾರಿಗಳನ್ನು ನಂಬಿಸಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೇರಳದ ಪಶುಸಂಗೋಪನಾ ಸಚಿವೆ ಜೆ. ಚಿಂಚು ರಾಣಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವುದಾಗಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ನಾಯಿಗಳನ್ನು ಸಾಗಿಸಲು ಬಳಸುತ್ತಿದ್ದ ವಾಹನದಲ್ಲಿ ಪತ್ತೆಯಾದ ಸಿರಿಂಜ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ ವಾರ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ವಿಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಎನ್‌ಜಿಒ ಪೀಪಲ್ ಫಾರ್ ಅನಿಮಲ್ಸ್ ಕೂಡ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ.
ಬೀದಿ ನಾಯಿಗಳ ಕಾಟ ಹೆಚ್ಚಾಗಿ ಆತಂಕಕ್ಕೆ ಕಾರಣವಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇತ್ತೀಚೆಗೆ ಬೀದಿ ನಾಯಿ ಕಡಿತಕ್ಕೆ ಒಳಗಾದ ನಾಲ್ವರಲ್ಲಿ ಭದ್ರತಾ ಸಿಬ್ಬಂದಿ ಮತ್ತು ಮಹಿಳಾ ವಿಮಾನಯಾನ ಸಿಬ್ಬಂದಿ ಸೇರಿದ್ದಾರೆ. ಮಹಾನಗರ ಪಾಲಿಕೆಯ ಗಮನಕ್ಕೆ ತಂದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.