ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬದ ಪುನರ್ವಸತಿಗೆ ಸರ್ಕಾರ ಹೆಚ್ಚಿನ ಪರಿಗಣನೆ ನೀಡುವುದಾಗಿ ಕೇರಳ ರಾಜ್ಯ ಪರಿಶಿಷ್ಟ ಜಾತಿ-ಪ.ವರ್ಗ ಅಭಿವೃದ್ಧಿ ಮತ್ತು ಮುಜರಾಯಿ ಖಾತೆ ಸಚಿವ ರಾಧಾಕೃಷ್ಣನ್ ತಿಳಿಸಿದ್ದಾರೆ.
ಅವರು ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಕಾನದಲ್ಲಿ ಎಂಡೋಸಲ್ಫಾನ್ ಸಂತ್ರಸ್ತ ಅಂಗವಿಕಲ ಮಕ್ಕಳಿಗಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಸಾಂತ್ವನ ಬಡ್ಸ್ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಬಡ್ಸ್ ಶಾಲೆಗಳು ಆರಂಭಗೊಂಡ ನಂತರ ಈ ರೀತಿಯ ಅಂಗವೈಕಲ್ಯ ಹೊಂದಿರುವ ಮಕ್ಕಳ ಹಾಗೂ ಅವರ ಹೆತ್ತವರಲ್ಲಿ ಒಂದಷ್ಟು ಮಂದಹಾಸ ಮುಖಮಾಡಿದೆ. ಅಂಗವಿಕಲ ಮಕ್ಕಳ ಪಾಲನೆ ಕೇವಲ ಹೆತ್ತವರ ಜವಾಬ್ದಾರಿಯಲ್ಲ, ಈ ಕಾರ್ಯದಲ್ಲಿ ಬದಲಾಗಿ ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್, ಎಣ್ಮಕಜೆ ಗ್ರಪಂ ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಿ.ಎಸ್. ಗಾಂಭಿರ್, ಸೌದಾಬಿ ಹನೀಫ್, ಜಯಶ್ರೀ ಕುಲಾಲ್, ಕೇರಳ ರಾಜ್ಯ ಕಿರುಕೈಗಾರಿಕಾ ಸಂಘದ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ರಾಜಾರಾಮ ಎಸ್. ಪೆರ್ಲ, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಗ್ರಾಮ ಪಂಚಾಯಿತಿ ಸದಸ್ಯರು, ಇತರ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಪ್ರಭಾರ ಕಾರ್ಯದರ್ಶಿ ಪ್ರೇಮ್‍ಚಂದ್ ಪಿ.ಎಸ್ ವರದಿ ಮಂಡಿಸಿದರು. ಸಾಂತ್ವನ ಬಡ್ಸ್ ಶಾಲಾ ಪ್ರಾಂಶುಪಾಲೆ ಮರಿಯಂಬಿ ವಂದಿಸಿದರು.