ಜೋಹಾನ್ಸ್‌ಬರ್ಗ್: ಬ್ರಿಕ್ಸ್ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ -3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗುವ ಕ್ಷಣಗಳನ್ನು ವೀಕ್ಷಿಸಿದರು.
ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರು "ಭಾರತ ಚಂದ್ರನ ಮೇಲಿದೆ" ಎಂದು ಹೇಳಿದರು.
ಬಳಿಕ ವರ್ಚುವಲ್ ಮೂಲಕ ದೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಕ್ಷಣ ಅಮೂಲ್ಯವಾಗಿದೆ ಮತ್ತು ಅಭೂತಪೂರ್ವವಾಗಿದೆ. ಈ ಕ್ಷಣ ನವ ಭಾರತದ ಉದಯವಾಗಿದೆ. ಈ ಕ್ಷಣ 1.4 ಬಿಲಿಯನ್ ಹೃದಯ ಬಡಿತಗಳ ಶಕ್ತಿಯಾಗಿದೆ. ಅಮೃತ ಕಾಲದ ಈ ಹಂತದಲ್ಲಿ ಅಮೃತ ವರ್ಷ ಯಶಸ್ವಿಯಾಗಿದೆ" ಎಂದು ಹೇಳಿದರು.
ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಅಭೂತಪೂರ್ವ ಸಾಧನೆಗಾಗಿ ಇಸ್ರೋ, ಅದರ ವಿಜ್ಞಾನಿಗಳನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
"ನಾನು ದಕ್ಷಿಣ ಆಫ್ರಿಕಾದಲ್ಲಿರಬಹುದು ಆದರೆ ನನ್ನ ಹೃದಯ ಯಾವಾಗಲೂ ಚಂದ್ರಯಾನ ಮಿಷನ್‌ನಲ್ಲಿದೆ" "ಇದೊಂದು ಐತಿಹಾಸಿಕ ಕ್ಷಣ. ನವ ಭಾರತದ ಹೊಸ ಹಾರಾಟಕ್ಕೆ ನಾವು ಸಾಕ್ಷಿಯಾಗಿದ್ದೇವೆ; ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಸಾಫ್ಟ್ ಲ್ಯಾಂಡಿಂಗ್ ಮಾಡುತ್ತಿದ್ದಂತೆ ಬೆಂಗಳೂರಿನ ಇಸ್ರೋದ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್‌ನಲ್ಲಿ ಸಂಭ್ರಮಾಚರಣೆ ಮಾಡುವ ಮೂಲಕ ಹೊಸ ಇತಿಹಾಸ ಬರೆಯಲಾಗಿದೆ ಎಂದು ಮೋದಿ ಹೇಳಿದ್ದಾರೆ.