ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗಳ ಮೇಲೆ ನಿಯಂತ್ರಣ ಹೊಂದುವ ಸಂಬಂಧ ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಿದ್ದ ದೆಹಲಿ ಸೇವಾ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಸಹಿ ಹಾಕಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ತಿದ್ದುಪಡಿ ಮಸೂದೆ 2023ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡಿದ್ದಾರೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಇದರೊಂದಿಗೆ, ಈ ಮಸೂದೆಯು ಕಾನೂನಾಗುತ್ತದೆ ಮತ್ತು ಕೇಂದ್ರ ಸರ್ಕಾರ ದೆಹಲಿ ಆಡಳಿತ ಸೇವೆಗಳ ನಿಯಂತ್ರಣ ಸಂಬಂಧ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಬದಲಾಯಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಸೇವಾ ಮಸೂದೆಯನ್ನು ಆಗಸ್ಟ್ 3 ರಂದು ಲೋಕಸಭೆಯಲ್ಲಿ ಮತ್ತು ಆಗಸ್ಟ್ 7 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು.
ಈ ಕಾಯಿದೆಯು ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ದೆಹಲಿ ಸರ್ಕಾರದ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡುತ್ತದೆ ಮತ್ತು ರಾಷ್ಟ್ರ ರಾಜಧಾನಿಯ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣ ಮತ್ತಷ್ಟು ಹೆಚ್ಚಾಗಲಿದೆ.
ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್ ಮತ್ತು ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ, ರಾಷ್ಟ್ರ ರಾಜಧಾನಿಯಲ್ಲಿನ ಸೇವೆಗಳ ಮೇಲೆ ದೆಹಲಿಯ ಚುನಾಯಿತ ಸರ್ಕಾರ ಅಧಿಕಾರ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಮೇ 11 ರಂದು ತೀರ್ಪು ನೀಡಿತ್ತು. ಸುಪ್ರೀಂ ಆದೇಶವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಕಳೆದ ಮೇ ತಿಂಗಳಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು.
ದೆಹಲಿ ಸೇವಾ ಮಸೂದೆ ಅಲ್ಲದೇ, ಜನ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ 2023, ರಾಷ್ಟ್ರ ರಾಜಧಾನಿ ದೆಹಲಿ ಸರ್ಕಾರದ (ತಿದ್ದುಪಡಿ ) ಮಸೂದೆ, ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ, ಜನನ ಮತ್ತು ಮರಣಗಳ ನೋಂದಣಿ ತಿದ್ದುಪಡಿ ಮಸೂದೆ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ತಿದ್ದುಪಡಿ) ಮಸೂದೆ, ನ್ಯಾಷನಲ್ ಡೆಂಟಲ್ ಕಮಿಷನ್ ಆಕ್ಟ್ ಮತ್ತು ಕಡಲಾಚೆ ಪ್ರದೇಶಗಳ ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.