ಕಾಸರಗೋಡು: ಜಿಲ್ಲೆಯ ಯುವಕರು ಮತ್ತು ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳಲ್ಲಿ ಉದ್ಯೋಗ ಕೌಶಲ್ಯ ತರಬೇತಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಕರೆನೀಡಿದರು.
ಜಿಲ್ಲಾ ಮಟ್ಟದಲ್ಲಿ ಇತ್ತೀಚೆಗೆ ನಡೆದ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಗೆ ಸೇರಿದವರಿಗೆ ಆಸಕ್ತಿ ಇರುವ ಕಾರ್ಯ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ನೀಡಬೇಕು ಎಂದರು. ಜಿಲ್ಲಾಧಿಕಾರಿ ಕಚೇರಿ ಮಿನಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕೌಶಲ್ಯ ಸಂಯೋಜಕ ಎಂ.ಜಿ.ನಿದಿನ್ ಕೌಶಲ್ಯ ಸಮಿತಿ ವರದಿ ಮಂಡಿಸಿದರು. ಉದ್ಯೋಗ ವಿನಿಮಯ, ಐಟಿಐ, ಎಎಸ್‍ಎಪಿ ಮತ್ತು ಕುಟುಂಬಶ್ರೀ ಜ್ಞಾನ ಆರ್ಥಿಕ ಮಿಷನ್ ಜಿಲ್ಲೆಯಲ್ಲಿ ನಡೆಸಿದ ಉದ್ಯೋಗ ಮೇಳ ಮತ್ತು ಕೌಶಲ್ಯಾಭಿವೃದ್ಧಿ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಉದ್ಯೋಗ ಮೇಳಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಜಿಲ್ಲೆಯ ಉದ್ಯೋಗ ಕೌಶಲದ ಅಂತರವನ್ನು ಗುರುತಿಸಲು ದತ್ತಾಂಶ ಸಂಗ್ರಹಣೆಯೊಂದಿಗೆ ಡ್ಯಾಶ್ ಬೋರ್ಡ್ ತಯಾರಿಸಲಾಗುವುದು. ಸಭೆಯಲ್ಲಿ ಮಾರ್ಚ್‍ನಿಂದ ವಿವಿಧ ಇಲಾಖೆಗಳು ನಡೆಸಿದ ಉದ್ಯೋಗ ಮೇಳಗಳಲ್ಲಿ ಕೆಲಸಕ್ಕೆ ಸೇರಿದವರು ಹಾಗೂ ಇನ್ನೂ ಕಾರ್ಯನಿರ್ವಹಿಸುತ್ತಿರುವವರ ವಿವರ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ, ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಮಾತನಾಡಿದರು.