ಇಂಫಾಲ್: ನಾಗಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಉರ್ಖುಲ್ ಜಿಲ್ಲೆಯಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಮೂವರನ್ನು ಅಪರಿಚಿತರು ಶುಕ್ರವಾರ ಬೆಳಿಗ್ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಕುಕಿ ಸಮುದಾಯದವರು ಇರುವ ಥೋವೈ ಕುಕಿ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಉರ್ಖುಲ್ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿರುವ ನಾಗಾ ಸಮುದಾಯದವರು, ಮೂರು ತಿಂಗಳಿನಿಂದ ನಡೆಯುತ್ತಿರುವ ಕುಕಿ-ಮೈತೇಯಿ ಹಿಂಸಾಚಾರದಿಂದ ಅಂತರಕಾಯ್ದುಕೊಂಡಿದ್ದಾರೆ. ಹೀಗಾಗಿ, ಹಳ್ಳಿಯ ಮೇಲೆ ದಾಳಿ ಮಾಡಿರುವ ಬಂದೂಕುಧಾರಿಗಳು ಮೈತೇಯಿ ಸಮುದಾಯದವರೇ ಆಗಿರಬಹುದು ಎಂದು ಶಂಕಿಸಲಾಗಿದೆ.
ಕೃತ್ಯ ನಡೆದಿರುವುದನ್ನು ಖಚಿತಪಡಿಸಿರುವ ಉರ್ಖುಲ್ ಎಸ್.ಪಿ. ನಿಂಗ್ಶೆಮ್ ವಾಷುಮ್, ಪ್ರಕರಣವು ಸದ್ಯ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದೆ. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಮೃತರನ್ನು ಹೊಲ್ಲೆನ್‌ಸನ್ ಬೈತೆ, ಥಾಂಗ್‌ಖೋಕೈ ಹೌಕಿಪ್ ಮತ್ತು ಜಮ್‌ಖೊಗಿನ್ ಹೌಕಿಪ್ ಎಂದು ಗುರುತಿಸಲಾಗಿದೆ.
ಮೈತೇಯಿ ಮತ್ತು ಕುಕಿ ಸಮುದಾಯದವರ ನಡುವೆ ಮೇ 3ರಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಈವರಗೆ 160ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 60 ಸಾವಿರಕ್ಕೂ ಹೆಚ್ಚು ಜನರು ಆಶ್ರಯ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿರಲಿಲ್ಲ. ಆದರೆ, ಇಂದು (ಶುಕ್ರವಾರ) ನಡೆದಿರುವ ಕೃತ್ಯವು ಆತಂಕ ಸೃಷ್ಟಿಸಿದೆ.