ಕಾರವಾರದಲ್ಲಿ 8 ತಿಂಗಳ ಪುಟ್ಟ ಮಗು ಮೊಬೈಲ್ ಚಾರ್ಜರ್‌ನಿಂದಾಗಿ ಸಾವನ್ನಪ್ಪಿರುವ ಸುದ್ದಿ ನೋಡಿದ ಪ್ರತಿಯೊಬ್ಬರೋ ಅಯ್ಯೋ.. ಎಂದು ಮರುಗದೆ ಇರಲ್ಲ, ಆ ಮುದ್ದಾದ ಮುಖವನ್ನು ನೋಡುವಾಗ ಛೇ... ನಿರ್ಲಕ್ಷ್ಯಯಿಂದಾಗಿ ಅನ್ಯಾಯವಾಗಿ ಒಂದು ಮಗುವಿನ ಜೀವ ಹೋಯ್ತಲ್ಲ ಎಂದು ಜನ ಮಾತನಾಡುತ್ತಿದ್ದಾರೆ,
ಆದರೆ ಈ ಕುರಿತು ಜಾಗ್ರತೆ ಎಷ್ಟು ಮನೆಗಳಲ್ಲಿ ವಹಿಸಲಾಗುತ್ತಿದೆ ಎಂದು ನೋಡಿದರೆ ಎಲ್ಲಾ ಮನೆಗಳಲ್ಲಿ ಇಂಥ ನಿರ್ಲಕ್ಷ್ಯ ಕಂಡು ಬರುವುದು ಸರ್ವೇ ಸಾಮಾನ್ಯವಾಗಿದೆ, ಆದರೆ ಇಂಥ ಅವಘಡ ಸಂಭವಿಸಿದಾಗ ಈ ಕುರಿತು ಮಾತನಾಡುತ್ತೇವೆ, ನಂತರ ಮರೆತು ಬಿಡುತ್ತೇವೆ, ಆದರೆ ನಿಮ್ಮ ಮನೆಯಲ್ಲಿ ವರ್ಷಕ್ಕಿಂತ ಚಿಕ್ಕ ಮಕ್ಕಳಿದ್ದರೆ ನಿರ್ಲಕ್ಷ್ಯ ಬೇಡ್ವೆ ಬೇಡ.ಮೊಬೈಲ್ ಇಲ್ಲದ ಮನೆ ಇರಲ್ಲ, ಆದ್ದರಿಂದ ಮನೆಯಲ್ಲಿ ಮಕ್ಕಳಿದ್ದರೆ ಈ ಕುರಿತು ತುಂಬಾನೇ ಜಾಗ್ರತೆವಹಿಸಿ. ಕೆಲವರು ಮೊಬೈಲ್ ಚಾರ್ಜರ್‌ಗೆ ಹಾಕಿ, ನಂತರ ಮೊಬೈಲ್ ತೆಗೆದು ಚಾರ್ಜರ್ ಹಾಗೇ ಬಿಟ್ಟು ಹೋಗುತ್ತೇವೆ. ಆದರೆ ಮಕ್ಕಳಿರುವ ಮನೆಯಾದರೆ ತಪ್ಪಿಯೂ ಚಾರ್ಜರ್ ಹಾಗೆಯೇ ಬಿಡಬೇಡಿ. ಅವಘಡ ಸಂಭವಿಸಿ ದುಃಖ ಪಡುವ ಬದಲಿಗೆ ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು.
ಮೊಬೈಲ್ ಚಾರ್ಜರ್‌ನಿಂದ ಕೂಡ ಪ್ರಾಣ ಹೋಗುತ್ತೆ ಜಾಗ್ರತೆ
ಸಾಮಾನ್ಯವಾಗಿ ಮೊಬೈಲ್ ಚಾರ್ಜರ್ ನಾವು ಪ್ಲಗ್‌ಪಾಯಿಂಟ್‌ಗೆ ಹಾಕಿ ಕೈಯಲ್ಲಿ ಹಿಡಿದರೆ ಯಾವುದೇ ಶಾಕ್ ಹೊಡೆಯುವುದಿಲ್ಲ, ಆದ್ದರಿಂದ ಶಾಕ್ ಹೊಡೆಯಲ್ಲ ಎಂದೇ ನಾವು ಭಾವಿಸುತ್ತೇವೆ, ಆದರೆ ಮಕ್ಕಳು ನಮ್ಮ ಹಾಗೆ ಕೈಯಲ್ಲಿ ಹಿಡಿಯಲ್ಲ, ಐದು ವರ್ಷದ ಕೆಳಗಿನ ಮಕ್ಕಳಿಗೆ ಏನು ಸಿಕ್ಕರೂ ಬಾಯಿಗೆ ಹಾಕುವ ಅಭ್ಯಾಸ ಇರುತ್ತದೆ,ಅದರಂತೆ ಮೊಬೈಲ್ ಚಾರ್ಜರ್ ನೇತಾಡುತ್ತಿದ್ದರೆ ಅದನ್ನು ತೆಗೆದು ಬಾಯಿಗೆ ಇಡುತ್ತವೆ, ಬಾಯಲ್ಲಿ ಎಂಜಲು ಇರುತ್ತದೆ, ಕರೆಂಟ್ ದೇಹಕ್ಕೆ ಪಾಸಾಗಿ ಸಾವು ಸಂಭವಿಸುವುದು. ಆದ್ದರಿಂದ ಈ ಬಗ್ಗೆ ಪೋಷಕರು ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ.
ಮಕ್ಕಳಿರುವ ಮನೆಯಲ್ಲಿ ಚಾರ್ಜರ್ ಬಳಸುವವರು ಈ ವಿಷಯಗಳ ಕಡೆ ಗಮನ ನೀಡಲೇಬೇಕಾಗಿದೆ
- ಮಕ್ಕಳಿಗೆ ಮೊಬೈಲ್ ಎಟುಕುದ ಜಾಗದಲ್ಲಿ ಪ್ಲಗ್‌ಪಾಯಿಂಟ್ ಇದ್ದರೆ ಆ ಪ್ಲಗ್ ಪಾಯಿಂಟ್‌ನಲ್ಲಿ ಚಾರ್ಜ್‌ಗೆ ಇಡಿ. ಆದರೆ ಚಾರ್ಜರ್ ವೈರ್ ಅನ್ನು ಹಾಗೆಯೇ ನೇತು ಬಿಡಬೇಡಿ, ಚಾರ್ಜ್‌ನಿಂದ ಮೊಬೈಲ್ ತೆಗೆದ ಬಳಿಕ ಮೊಬೈಲ್ ಚಾರ್ಜರ್ ಅನ್ನು ಪ್ಲಗ್ ಪಾಯಿಂಟ್‌ನಿಂದ ತಪ್ಪದೆ ತೆಗೆದು ಇಡಬೇಕು.
- ಪ್ಲಗ್ ಪಾಯಿಂಟ್ ಮಗುವಿಗೆ ಎಟುಕುವ ರೀತಿಯಲ್ಲಿ ಇದೆಯೇ: ಮಾಡರ್ನ್ ಮನೆಗಳಲ್ಲಿ ಪ್ಲಗ್ ಪಾಯಿಂಟ್ ಗೋಡೆಯ ಕೆಳಭಾಗದಲ್ಲಿಯೂ ಇರುತ್ತದೆ. ಈ ರೀತಿ ಇದ್ದರೆ ಮಗು ಬಂದು ಆ ಪ್ಲಗ್‌ಪಾಯಿಂಟ್‌ಗೆ ಕೈ ಹಾಕಿದರೆ ಶಾಕ್ ಹೊಡೆಯುವುದು, ಆದ್ದರಿಂದ ನೀವು ಆ ಬ್ಲಗ್ ಪಾಯಿಂಟ್‌ಗೆ ಪ್ಲಾಸ್ಟರ್ ಹಾಕಿ ಮುಚ್ಚಿ ಅಥವಾ ಪ್ಲಗ್ ಪಾಯಿಂಟ್ ಮುಚ್ಚಲು ಹಾರ್ಡ್‌ವೇರ್‌ಶಾಪ್‌ಗಳಲ್ಲಿ ಪ್ಲಗ್ ಶಾಕಟ್ ಕವರ್‌ಗಳು ಸಿಗುತ್ತದೆ, ಅದನ್ನು ತಂದು ಹಾಕಿ.
- ಮಕ್ಕಳನ್ನು ಸ್ವಿಚ್‌ನಲ್ಲಿ ಆಡಲು ಬಿಡಬೇಡಿ: ಅಲ್ಲದೆ ಮಕ್ಕಳಿಗೆ ಸ್ವಿಚ್‌ನಲ್ಲಿ ಆಡಲು ಇಷ್ಟವಾಗುವುದು, ಸ್ವಿಚ್ ಬೋರ್ಡ್ ಹಳೆಯದಾಗಿದ್ದರೆ ಮಕ್ಕಳು ಬಾಯಿಯೊಳಗೆ ಕೈ ಹಾಕಿ ಒದ್ದೆ ಕೈಯಿಂದ ಸ್ವಿಚ್ ಮುಟ್ಟಿದಾಗ ಶಾಕ್ ಹೊಡೆಯುವುದು, ಆದ್ದರಿಂದ ಈ ಕುರಿತು ಜಾಗ್ರತೆವಹಿಸಿ.
'ಹೀಗೆ ಮಾಡುವುದರಿಂದ ಮಕ್ಕಳಿಗೆ ಕರೆಂಟ್ ಶಾಕ್ ಹೊಡೆಯುವುದನ್ನು ತಪ್ಪಿಸಬಹುದು.
ಚಾರ್ಜ್‌ನಲ್ಲಿ ಹಾಕಿ ಮೊಬೈಲ್‌ನಲ್ಲಿ ಮಾತನಾಡಬೇಡಿ
ಈ ಅಭ್ಯಾಸ ಕೂಡ ನಿಮ್ಮ ಪ್ರಾಣಕ್ಕೆ ಅಪಾಯಕಾರಿ. ಮೊಬೈಲ್ ಚಾರ್ಜ್‌ಗೆ ಹಾಕಿದಾಗ ಕಾಲ್ ಬಂದಾಗ ಹಾಗೇ ತೆಗೆದು ಮಾತನಾಡುವ ಅಭ್ಯಾಸವಿದ್ದರೆ ಆ ಅಭ್ಯಾಸ ಮೊದಲು ಬಿಡಿ. ಮಕ್ಕಳಿಗೂ ಅಷ್ಟೇ ಚಾರ್ಚ್‌ಗೆ ಹಾಕಿ ಮೊಬೈಲ್‌ನಲ್ಲಿ ಆಡಲು ಬಿಡಬೇಡಿ.
ಈ ಕುರಿತ ಚಿಕ್ಕ ಮುನ್ನೆಚ್ಚರಿಕೆ ದೊಡ್ಡ ಅಪಾಯಗಳನ್ನು ತಪ್ಪಿಸುತ್ತೆ.