ಕಾಸರಗೋಡು: ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕಾತಿ ವಿರುದ್ಧ ಕೇರಳ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪು ಕನ್ನಡಮಾಧ್ಯಮ ವಿದ್ಯಾರ್ಥಿಗಳ ಹೆತ್ತವರು ಹಾಗೂ ಸಮಸ್ತ ಕನ್ನಡಿಗರು ನಡೆಸಿರುವ ಹೋರಾಟಕ್ಕೆ ಸಂದ ಗೆಲುವಾಗಿದೆ ಎಂದು ಕನ್ನಡ ಸಾಹಿತ್ಯ ಪ್ರಿಷತ್ ಕೇರಳ ಘಟಕ ಅಧ್ಯಕ್ಷ ಎಸ್.ವಿ ಭಟ್ ತಿಳಿಸಿದ್ದಾರೆ.
ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರನ್ನು ನೇಮಿಸುವ ಮೂಲಕ ಭಾಷಾ ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದರ ವಇರುದ್ಧ ಶಾಲೆ ವಿದ್ಯಾರ್ಥಿಗಳು ಹಾಗೂ ಹೆತ್ತವರು ಹಲವು ದಿವಸಗಳ ಕಾಲ ಪ್ರತಿಭಟನೆಯನ್ನೂ ನಡೆಸಿದ್ದರು. ಈ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಿದ್ದರು. ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವು ಕೈಗೊಳ್ಳದಿರುವುದನ್ನು ಪ್ರತಿಭಟಿಸಿ ವಿದ್ಯಾರ್ಥಿ ಪೋಷಕರು ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕನ್ನಡ ಅರಿಯದ ಮಲಯಾಳಿ ಶಿಕ್ಷಕರಿಂದ ಬೋಧನೆ ನಡೆಸುವುದನ್ನು ನ್ಯಾಯಾಲಯದಲ್ಲಿ ಪ್ರಬಲವಾಗಿ ಪ್ರಸ್ತಾಪಿಸುವ ಮೂಲಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗುತ್ತಿರುವ ಸಮಸ್ಯೆಯನ್ನು ವಕೀಲರ ಮೂಲಕ ನ್ಯಾಯಾಲಯದ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.
ಕನ್ನಡ ಅರಿಯದ ಶಿಕ್ಷಕರನ್ನು ತಕ್ಷಣ ಬೇರೆ ಸ್ಥಳಕ್ಕೆ ವರ್ಗಾಯಿಸುವುದರ ಜತೆಗೆ ಕನ್ನಡಬಲ್ಲ ಶಿಕ್ಷಕರನ್ನು ಆ ಸ್ಥಾನಕ್ಕೆ ನೇಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡುವ ಮೂಲಕ ನ್ಯಾಯಾಲಯ ಕನ್ನಡಿಗರಲ್ಲಿ ಭರವಸೆಯನ್ನು ತಂದುಕೊಟ್ಟಿರುವುದಾಗಿ ತಿಳಿಸಿದ್ದಾರೆ. ನಿರಂತರ ಹೋರಾಟದ ಜತೆಗೆ ನ್ಯಾಯಾಲಯದ ಮೆಟ್ಟಿಲನ್ನೇರಿ ಸಮಸ್ತ ಕನ್ನಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವಲ್ಲಿ ಸಹಕರಿಸಿದ ಶಾಲಾ ವಿದ್ಯಾರ್ಥಿಗಳ ಪೋಷಕರು, ಇದಕ್ಕೆ ಸಹಕರಿಸಿದ ಶಿಕ್ಷಕರು, ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ ಎಂದು ತಿಳಿಸಿದ್ದಾರೆ. ಕೇರಳ ಉಚ್ಛ ನ್ಯಾಯಾಲಯದ ಈ ತೀರ್ಪು ಗಡಿನಾಡಿನ ಎಲ್ಲ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರುವಂತಾಗಬೇಕು ಎಂದೂ ಎಸ್.ವಿ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.