ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಮನರೇಗಾ) ಅಡಿಯಲ್ಲಿ ನಡೆಯುವ ಕಾಮಗಾರಿಗಳ ಮೇಲ್ವಿಚಾರಣೆಗೆ ಡ್ರೋನ್‌ಗಳನ್ನು ಬಳಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಹೊಸ ನೀತಿಯನ್ನು ರೂಪಿಸಿದೆ.
ಪ್ರಸ್ತುತದಲ್ಲಿ ಜರುಗುತ್ತಿರುವ, ಪೂರ್ಣಗೊಂಡ ಕಾಮಗಾರಿಗಳ ಮೇಲ್ವಿಚಾರಣೆಗೆ ಮತ್ತು ಮೌಲ್ಯಮಾಪನಕ್ಕೆ ಡ್ರೋನ್‌ಗಳನ್ನು ಬಳಸಲಾಗುವುದು ಎಂದು ನೀತಿಯಲ್ಲಿ ತಿಳಿಸಲಾಗಿದೆ.
ಮನರೇಗಾ ಕಾಮಗಾರಿಯ ತುರ್ತು ನಿರ್ವಹಣಾ ಸಂದರ್ಭದಲ್ಲಿ ಡ್ರೋನ್‌ಗಳ ಬಳಕೆಗೆ ವೆಚ್ಚ ಮಾಡಬಹುದು. ಡ್ರೋನ್‌ಗಳ ಬಳಕೆಗಾಗಿ ಈಗಾಗಲೇ ರಾಜ್ಯಗಳಿಗೆ ನೀಡಲಾದ ನಿಧಿಯಲ್ಲಿ ಶೇಕಡಾ 10ರಷ್ಟು ಹಣವನ್ನು ಮೀಸಲಿಡಲಾಗಿದೆ. ಕಾಮಗಾರಿಗಳ ಮೇಲ್ವಿಚಾರಣೆಗೆ ಡ್ರೋನ್ ತಂತ್ರಜ್ಞಾನದಲ್ಲಿ ಪರಿಣಿತವಾದ ಸಂಸ್ಥೆಗಳನ್ನು ನೇಮಿಸಿಕೊಳ್ಳುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ.
'ಮನರೇಗಾ ಕಾಮಗಾರಿಗಳ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಮತ್ತು ಪರಿಶೀಲಿಸಲು ಈ ತಂತ್ರಜ್ಞಾನವನ್ನು ಬಳಸಲು ಪ್ರಸ್ತಾಪಿಸಲಾಗಿದೆ' ಎಂದು ಸಚಿವಾಲಯದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳ ಸುತ್ತೋಲೆ ಮಾಹಿತಿ ನೀಡಿದೆ.
'ಕಾಮಗಾರಿಯ ಆರಂಭದ ಮೊದಲು, ಕಾಮಗಾರಿಯ ನಡೆಯುತ್ತಿರುವ ಸಂದರ್ಭದ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕದ ಭೌಗೋಳಿಕ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಡ್ರೋನ್‌ಗಳು ಮೇಲ್ವಿಚಾರಣೆ ನಡೆಸಲಿವೆ. ಪರಿಣಾಮಕಾರಿ ಮೌಲ್ಯಮಾಪನಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಮತ್ತು ನೀರು ಹಾಗೂ ಕೃಷಿ ಸಂಬಂಧಿತ ಕೆಲಸಗಳ ಮಾಹಿತಿಯನ್ನು ಡ್ರೋನ್‌ಗಳು ಕ್ರೋಡೀಕರಿಸಲಿವೆ' ಎಂದು ಅದು ಹೇಳಿದೆ.
ಕುಂದುಕೊರತೆಗಳ ನಿವಾರಣೆಗೆ ಬಳಕೆ
ಮನರೇಗಾ ಕಾಮಗಾರಿಗಳ ಕುರಿತು ದಾಖಲಾದ ದೂರುಗಳ, ಕುಂದುಕೊರತೆಗಳ ನಿವಾರಣೆಗೆ, ವಿಶೇಷ ತಪಾಸಣೆಗೆ ಡ್ರೋನ್‌ಗಳನ್ನು ಬಳಸಬಹುದಾಗಿದೆ ಎಂದು ಸಚಿವಾಲಯದ ಸುತ್ತೋಲೆ ತಿಳಿಸಿದೆ.
'ಕುಂದುಕೊರತೆಗಳನ್ನು ಬಗೆಹರಿಸಲು ಪ್ರತಿ ಜಿಲ್ಲೆಯಲ್ಲೂ ಒಬ್ಬ ವಿಶೇಷ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ವಿಶೇಷ ಅಧಿಕಾರಿಯು ಕಾಮಗಾರಿಗಳ ಪ್ರಗತಿ ಕುರಿತು ಡ್ರೋನ್ ಮೂಲಕವೇ ಮೇಲ್ವಿಚಾರಣೆ ಮಾಡಬಹುದು' ಎಂದೂ ಸಚಿವಾಲಯ ವಿವರಿಸಿದೆ
ಅಲ್ಲದೇ, ಡ್ರೋನ್‌ಗಳು ಉನ್ನತ ಮಟ್ಟದ ಕ್ಯಾಮೆರಾವನ್ನು ಒಳಗೊಂಡಿರಬೇಕು. ಚಿತ್ರೀಕರಿಸಲಾದ ಎಲ್ಲ ವಿಡಿಯೊಗಳು ಮತ್ತು ಫೋಟೊಗಳನ್ನು ಮನರೇಗಾ ಸಾಫ್ಟ್ ಜಾಲತಾಣದಲ್ಲಿ ಮಾತ್ರ ಹಂಚಿಕೊಳ್ಳಬೇಕು ಎಂದು ಸಚಿವಾಲಯ ನಿರ್ದೇಶನ ನೀಡಿದೆ.