ಅಮೃತಸರ: ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಮಂಗಳವಾರ ಸಂಜೆ ಮೈನವಿರೇಳಿಸುವ ರೋಚಕ ಬೀಟಿಂಗ್ ರಿಟ್ರೀಟ್ ಸಮಾರಂಭ ನಡೆಯಿತು. ಗಡಿ ಭದ್ರತಾ ಪಡೆಯ ಯೋಧರು ಹಾಗೂ ಪಾಕಿಸ್ತಾನಿ ರೇಂಜರ್ ಗಳು ಜಂಟಿಯಾಗಿ ಬೀಟಿಂಗ್ ರಿಟ್ರೀಟ್ ನಡೆಸಿದರು.
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಜನರು, ಯೋಧರ ಘೋಷಣೆ ಮತ್ತು ಶೌರ್ಯಯುತ ಚಲನೆ ಕಂಡು ಮೂಕ ವಿಸ್ಮಿತರಾದರು. ಚಪ್ಪಾಳೆ ತಟ್ಟಿ, ಘೋಷಣೆ ಕೂಗುವ ಮೂಲಕ ಯೋಧರನ್ನು ಮತ್ತಷ್ಟು ಹುರಿದುಂಬಿಸಿದರು. ಸುಮಾರು ಮೂವತ್ತು ನಿಮಿಷ ಬೀಟಿಂಗ್ ರಿಟ್ರೀಟ್ ನಡೆಯಿತು.
ಬೀಟಿಂಗ್ ರಿಟ್ರೀಟ್ ಎನ್ನುವುದು ಸೂರ್ಯಾಸ್ತದ ವೇಳೆ ಯುದ್ಧರಂಗದಿಂದ ಸೇನಾ ಪಡೆಗಳು ಹಿಂದಕ್ಕೆ ಮರಳುವ ಶತಮಾನಗಳಷ್ಟು ಹಳೆಯದಾದ ಸೇನಾ ಸಂಪ್ರದಾಯವಾಗಿದೆ. ಯುದ್ಧ ಆರಂಭಿಸಲು ಕಹಳೆ ಮೊಳಗಿಸುವಂತೆ ಆ ದಿನದ ಯುದ್ಧ ಸ್ಥಗಿತಗೊಳಿಸಲು ಕೂಡ ಕಹಳೆ ಮೊಳಗಿಸಲಾಗುತ್ತದೆ. ಕೂಡಲೇ ಸೇನಾ ಪಡೆಗಳು ಕದನಕ್ಕೆ ವಿರಾಮ ನೀಡುತ್ತವೆ. ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಕ್ಕಿಳಿಸಿ ಯುದ್ಧರಂಗದಿಂದ ಹಿಂದೆ ಸರಿಯುತ್ತವೆ. ಹೀಗಾಗಿ ರಿಟ್ರೀಟ್ ಅಥವಾ ಹಿಂದೆ ಸರಿ ಎಂಬ ಪದವನ್ನು ಬಳಸಲಾಗುತ್ತಿದೆ.