ಕೊಚ್ಚಿ: ಬೈಕ್ ಚಲಾಯಿಸುವಾಗ ವಿಷಕಾರಿ ಹಾವು ಕಡಿದರೂ ಯುವಕನೊಬ್ಬ ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಕೇರಳದ ಕೊಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯಲ್ಲಿ ನಡೆದಿದೆ.
ರಾಹುಲ್ (30) ಬಚಾವಾದ ಯುವಕ. ಈತ ನಡುವತ್ತೂರಿನ ನಿವಾಸಿ ಹಾಗೂ ಖಾಸಗಿ ಕಂಪನಿ ಉದ್ಯೋಗಿ.
ಹಾವನ್ನು ಬಿಡಿಸಲು ನಾನು ಬಲವಾಗಿ ತಲೆ ಅಲ್ಲಾಡಿಸಿದೆ. ಅದು ನೆಲದ ಮೇಲೆ ಬಿದ್ದಿತು ಮತ್ತು ಸುರಕ್ಷಿತ ಸ್ಥಳವನ್ನು ಹುಡುಕುತ್ತಾ ವೇಗವಾಗಿ ಚಲಿಸಿತು ಎಂದು ರಾಹುಲ್ ಹೇಳಿದ್ದಾರೆ. ಹಾವು ಕಣ್ಮರೆಯಾದರೂ, ಭಯವನ್ನು ಹೋಗಲಾಡಿಸಲು ನನಗೆ ಸಾಧ್ಯವಾಗಲಿಲ್ಲ. ಅಲ್ಲಿಯೇ ಇದ್ದ ಸ್ಥಳಿಯರು ನನ್ನನ್ನ ಕೊಯಿಲಾಂಡಿ ತಾಲೂಕು ಆಸ್ಪತ್ರೆಯ ಕೊಠಡಿಯೊಳಗೆ ಕರೆದುಕೊಂಡು ಹೋಗಿದ್ದು ಮಾತ್ರ ನನಗೆ ನೆನಪಿದೆ ಎಂದು ರಾಹುಲ್ ತಿಳಿಸಿದ್ದಾರೆ.
ದಾರಿಹೋಕರು ಮತ್ತು ಸ್ಥಳೀಯ ನಿವಾಸಿಗಳು ರಾಹುಲ್ರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರಿಗೆ ಆಯಂಟಿ ಸ್ನೇಕ್ ವೆನಮ್(ಎಎಸ್ವಿ) ಮದ್ದು ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಕೋಯಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (MCH) ಸ್ಥಳಾಂತರಿಸಲಾಯಿತು. ರಾಹುಲ್ ಅವರ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲು ವೈದ್ಯರು ಸುಮಾರು 24 ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡರು.
ಸೂಕ್ತ ಸಮಯದಲ್ಲಿ ಆಯಂಟಿ ವೆನಮ್ ಚುಚ್ಚುಮದ್ದು ಮತ್ತು ಚಿಕಿತ್ಸೆ ದೊರೆತಿದ್ದಕ್ಕೆ ರಾಹುಲ್ ಆರೋಗ್ಯ ಸ್ಥಿರವಾಗಿದೆ. ಒಂದು ವೇಳೆ ಸೂಕ್ತ ಚಿಕಿತ್ಸೆ ದೊರೆಯದೇ ಇದ್ದಿದ್ದರೆ ರಾಹುಲ್ ಸಾವು ಖಚಿತವಾಗಿತ್ತು. ಆದರೆ, ಅವರ ಬಾಳಲ್ಲಿ ಪವಾಡವೇ ನಡೆದಿದೆ. ಮಂಗಳವಾರ ಮನೆಗೆ ವಾಪಸ್ ಬಂದಿದ್ದಾರೆ. 10 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ರಾಹುಲ್ಗೆ ವೈದ್ಯರು ತಿಳಿಸಿದ್ದಾರೆ. ಇದೇ ರೀತಿ ಕಳೆದ 8 ತಿಂಗಳಲ್ಲಿ ಹೆಲ್ಮೆಟ್ ಒಳಗೆ ಹಾವು ಕಚ್ಚಿದ 12 ಪ್ರಕರಣಗಳು ಕೇರಳದಲ್ಲಿ ವರದಿಯಾಗಿವೆ. ಸೂಕ್ತ ಚಿಕಿತ್ಸೆಯಿಂದಾಗಿ ಯಾರಿಗೂ ಪ್ರಾಣಹಾನಿ ಆಗಿಲ್ಲ.
ಹಾವುಗಳಂತಹ ಸರೀಸೃಪಗಳು ಒಣ ಮತ್ತು ಬೆಚ್ಚಗಿನ ತಾಣಗಳನ್ನು ಹುಡುಕಿಕೊಂಡು ತಮ್ಮ ವಿಶ್ರಾಂತಿ ಸ್ಥಳಗಳಿಂದ ಹೊರಬರುತ್ತವೆ. ಹಾವುಗಳಿಗೆ ತೆರೆದ ಸ್ಥಳದಲ್ಲಿ ಇರಿಸಲಾಗಿರುವ ಹೆಲ್ಮೆಟ್‌ಗಳು ವಿಶ್ರಾಂತಿ ಪಡೆಯಲು ಸುರಕ್ಷಿತ ಸ್ಥಳವಾಗಿದೆ ಎಂದು ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ತಜ್ಞ ಸುನಿಶಾ ಮೆನನ್ ಹೇಳಿದ್ದಾರೆ.
ಹಾವು ಕಡಿತದಿಂದ ಬಳಲುತ್ತಿರುವ ಯಾರಾದರೂ ತಕ್ಷಣ ವೃತ್ತಿಪರ ವೈದ್ಯಕೀಯ ಸಹಾಯವನ್ನು ಪಡೆಯಬೇಕು. ನಮ್ಮ ದೇಶವು ವಿವಿಧ ಹಾವುಗಳಿಗೆ ನೆಲೆಯಾಗಿದೆ. ಇಲ್ಲಿ ವಿಷಕಾರಿ ಮತ್ತು ವಿಷಕಾರಿಯಲ್ಲದ ಜಾತಿಗಳ ನಡುವೆ ವ್ಯತ್ಯಾಸ ಗುರುತಿಸುವುದು ಸವಾಲಿನ ಸಂಗತಿಯಾಗಿದೆ. ಅದಕ್ಕಾಗಿಯೇ ನಾವು ಹಾವುಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಸುನಿಶಾ ಮೆನನ್ ಸಲಹೆ ನೀಡಿದ್ದಾರೆ.