ಅಮೃತಸರ: ತಮ್ಮ ಪತ್ರಗಳಿಗೆ ಉತ್ತರಿಸಿ ತ್ವರಿತ ಕ್ರಮಕೈಗೊಳ್ಳದಿದ್ದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡುವುದಾಗಿ ಪಂಜಾಬ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಈ ರೀತಿಯ ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ ಎಂದಿದ್ದಾರೆ.
ರಾಜ್ಯಪಾಲರು ಕಳುಹಿಸಿರುವ ಪತ್ರಗಳಿಗೆ ಉತ್ತರ ನೀಡಲಾಗಿದ್ದು, ಯಾಕೆ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಪಂಜಾಬಿನ ಜನರು ಶಾಂತಿಪ್ರಿಯರಾಗಿದ್ದು, ರಾಜ್ಯಪಾಲರ ಹೇಳಿಕೆಗಳಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.
ನಿನ್ನೆ ರಾಜ್ಯಪಾಲರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿದ್ದು, ಆಗಸ್ಟ್ ತಿಂಗಳೊಂದರಲ್ಲೇ 41 ಕೆಜಿ ಹೆರಾಯಿನ್, 753 ಗ್ಯಾಂಗ್ಸ್ಟಾರ್, 786 ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಜ್ಯಪಾಲರು ಇಲ್ಲಿಯವರೆಗೆ ನನಗೆ 16 ಪತ್ರಗಳನ್ನು ಬರೆದಿದ್ದು, ಇದರಲ್ಲಿ 9 ಪತ್ರಗಳಿಗೆ ಉತ್ತರಿಸಿದ್ದೇನೆ. ಇನ್ನು ಏಳು ಪತ್ರಗಳಿಗೆ ಉತ್ತರಿಸಬೇಕಿದ್ದು, ರಾಜ್ಯಪಾಲರು ಯಾಕಿಷ್ಟು ಆತುರ ಪಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗಿಲ್ಲ. ರಾಜ್ಯಪಾಲರು ಎಂದಿಗೂ ಗ್ರಾಮೀಣಭಿವೃದ್ದಿ, ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿಲ್ಲ. ಅವರು ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗಿರುವಂತೆ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯಪಾಲರು ಬರೆದಿರುವ ಪ್ರತಿಯೊಂದು ಅಕ್ಷರದಲ್ಲಿ ಅಧಿಕಾರದ ಮೇಲಿನ ವ್ಯಾಮೋಹವನ್ನು ಎತ್ತಿ ತೋರಿಸುತ್ತಿದೆ. ಅವರು ರಾಜಸ್ಥಾನ ಮೂಲದವರಾದರು ನಾಗ್ಪುರದಿಂದ ಬಂದವರು. ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ನೀವು ಅಲ್ಲಿಂದ ಸ್ಪರ್ಧಿಸಿ ಮುಖ್ಯಮಂತ್ರಿಯಾಗಿ ಎಂದು ರಾಜ್ಯಪಾಲರ ಪತ್ರಕ್ಕೆ ಪಂಜಾಬ್ ಸಿಎಂ ಭಗವಂತ್ ಮಾನ್ ತಿರುಗೇಟು ನೀಡಿದ್ದಾರೆ.