ನವದೆಹಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇರುವುದರ ಬಗ್ಗೆ ಒತ್ತಿ ಹೇಳಿರುವ ಸಂಸದೀಯ ಸ್ಥಾಯಿ ಸಮಿತಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲಾತಿ ಶಿಫಾರಸು ಮಾಡುವುದರ ಜತೆಗೆ ಮಹಿಳೆಯರು ಸೇನೆಗೆ ಸೇರಲು ಉತ್ತೇಜನ ನೀಡುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸಲಹೆ ನೀಡಿದೆ.
ಮಹಿಳಾ ಅಧಿಕಾರಿಗಳಿಗೆ ಕಚೇರಿಗಳಲ್ಲಿ ಕೆಲಸ ನೀಡುವುದು ಮತ್ತು ಕಠಿಣ ಕೆಲಸದ ಪರಿಸ್ಥಿತಿಗಳಿಗೆ ಅವರನ್ನು ಒಳಪಡಿಸದಂತೆ ನೀತಿ ಜಾರಿಗೆ ತರಬಹುದು ಎಂದು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ನೇತೃತ್ವದ ಕಾನೂನು ಮತ್ತು ನ್ಯಾಯ ಸಂಸದೀಯ ಸ್ಥಾಯಿ ಸಮಿತಿಯು ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.
2022ರ ಸೆ. 30ರ ವೇಳೆಗೆ ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಮಹಿಳಾ ಸಿಬ್ಬಂದಿ ಪ್ರಾತಿನಿಧ್ಯ ಶೇಕಡಾ 3.76 ರಷ್ಟಿದೆ ಎಂದು ವರದಿ ಹೇಳಿದೆ.
'ಸಾಧ್ಯವಾದಷ್ಟು ಮಟ್ಟಿಗೆ ಸೇನೆಗೆ ಸೇರಲು ಮಹಿಳೆಯರನ್ನು ಪ್ರೋತ್ಸಾಹಿಸಲು ಗೃಹ ಸಚಿವಾಲಯ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೂ ಕೆಲವು ರೀತಿಯ ಮೀಸಲಾತಿ ನೀಡಬಹುದು ಹಾಗೂ ಅವರ ನೇಮಕಾತಿಗೆ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಸಮಿತಿ ಶಿಫಾರಸು ಮಾಡಿದೆ.
ಕೇಂದ್ರೀಯ ಪಡೆಗಳಲ್ಲಿ ಮಹಿಳೆಯರಿಗೆ ಕೇವಲ 3.65 ಪ್ರತಿಶತ ಖಾಲಿ ಹುದ್ದೆಗಳನ್ನು ಇಲ್ಲಿಯವರೆಗೆ ಭರ್ತಿ ಮಾಡಲಾಗಿದೆ. ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಮತ್ತು ಎಸ್‌ಎಸ್‌ಬಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕೇವಲ ಶೇಕಡಾ 14 ರಿಂದ ಶೇಕಡಾ 15, ಸಿಐಎಸ್‌ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ)ಯಲ್ಲಿ ಶೇ 6.35 ಮತ್ತು ಐಟಿಬಿಪಿಯಲ್ಲಿ ಶೇಕಡಾ 2.83 ಎಂದು ವರದಿ ತಿಳಿಸಿದೆ.
ಎಲ್ಲಾ ಇಲಾಖೆಗಳು ಸಕಾಲದಲ್ಲಿ ಖಾಲಿ ಹುದ್ದೆಗಳ ವಿವರಗಳನ್ನು ಗೃಹ ಸಚಿವಾಲಯಕ್ಕೆ ಕಳುಹಿಸುವಂತೆ ಕಟ್ಟುನಿಟ್ಟಾಗಿ ನಿರ್ದೇಶಿಸಬೇಕು ಮತ್ತು ಖಾಲಿ ಹುದ್ದೆಗಳ ವಿವರ ಕಳುಹಿಸಲು ವರ್ಷಗಳನ್ನು ತೆಗೆದುಕೊಳ್ಳಬಾರದು ಎಂದೂ ತಿಳಿಸಿದೆ.