ಡೆಹ್ರಾಡೂನ್: ಉತ್ತರಾಖಂಡದ ಸಹಸ್ತ್ರಧಾರಾದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಜಾರಿ ಬಿದ್ದು 20 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಹಸ್ತ್ರಧಾರಾ ಡೆಹ್ರಾಡೂನ್‌ನ ಹೊರವಲಯದಲ್ಲಿರುವ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.
ಉತ್ತರ ಪ್ರದೇಶದ ಮೊರಾದಾಬಾದ್‌ನ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಸ್ವಾತಿ ಜೈನ್ ಭಾನುವಾರ ಸ್ನೇಹಿತರೊಂದಿಗೆ ಸಹಸ್ತ್ರಧಾರೆಗೆ ಹೋಗಿದ್ದರು.
ನೀರಿನಲ್ಲಿ ಸ್ನಾನ ಮಾಡಿದ ನಂತರ, ಸ್ವಾತಿ ಜೈನ್ ಅವರು ಬಂಡೆ ಹತ್ತಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಸ್ಪ್ರಿಂಗ್‌ಗೆ ಜಾರಿ ಬಿದ್ದಿದ್ದಾರೆ ಎಂದು ರಾಜ್‌ಪುರ ಎಸ್‌ಎಚ್‌ಒ ಜಿತೇಂದ್ರ ಅವರು ಚೌಹಾಣ್ ಅವರು ತಿಳಿಸಿದ್ದಾರೆ.
ಭಾರೀ ಮಳೆಯ ನಂತರ ಉಕ್ಕಿ ಹರಿಯುತ್ತಿದ್ದ ಪ್ರವಾಹದಿಂದ ಸ್ವಾತಿ ಜೈನ್ ಅವರು ಕೊಚ್ಚಿಹೋಗಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜೈನ್ ಅವರನ್ನು ಜಾರಿ ಬಿದ್ದ ಸ್ಥಳದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಪತ್ತೆ ಹಚ್ಚಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಚೌಹಾಣ್ ತಿಳಿಸಿದ್ದಾರೆ.