ಕಾಸರಗೋಡು: ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿದ ವಿಜ್ಞಾನಿಗಳ ತಂಡದಲ್ಲಿ ಕಾಸರಗೋಡಿನ ಕೃಷ್ಣಮೋಹನ ಶ್ಯಾನುಭಾಗ್ ಕೂಡಾ ಒಬ್ಬರಾಗಿದ್ದಾರೆ. ಚೆಂಗಳ ಎರಿಯಪಾಡಿಯಲ್ಲಿ ಹುಟ್ಟಿ ಬೆಳೆದ ಕೃಷ್ಣಮೋಹನ್ ಅವರು ಚಂದ್ರಯಾನದ ಕೀರ್ತಿ ಪತಾಕೆ ಎತ್ತಿ ಹಿಡಿದಿರುವ ತಂಡದ ಸದಸ್ಯರಲ್ಲಿ ಒಬ್ಬರು ಎಂಬುದು ಕಾಸರಗೋಡಿಗೂ ಹೆಮ್ಮೆ ತಂದುಕೊಟ್ಟಿದೆ.
ಇವರು ಎರಿಯಪಾಡಿ ನಿವಾಸಿ ವಿಷ್ಣು ಶಾನುಭಾಗ್-ಪ್ರೇಮಾವತಿ ದಂಪತಿಯ ಪುತ್ರ. ಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ ಪ್ರಾಥಮಿಕ, ಕಾಸರಗೋಡಿನ ಬಿ.ಇ.ಎಂ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ನಡೆಸಿದ್ದಾರೆ. ನಂತರ ಭೋಪಾಲ್ ನಲ್ಲಿ ಬಿ.ಟೆಕ್ ಹಾಗೂ ಸುರತ್ಕಲ್ ಕಾಲೇಜಿನಿಂದ ಎಂ.ಟೆಕ್ ಪದವಿ ಪಡೆದುಕೊಂಡಿದ್ದಾರೆ. ವೈಜ್ಞಾನಿಕ ಸಂಶೋಧನೆಗೆ ಮಹತ್ತರ ಕೊಡುಗೆ ನೀಡಿದ್ದ ಕೃಷ್ಣಮೋಹನ ಶಾನ್‍ಭಾಗ್ ಹಿಂತಿರುಗಿ ನೋಡಲಿಲ್ಲ.
ಅವರು ಇಸ್ರೋದ ತಿರುವನಂತಪುರಂ ಘಟಕಕ್ಕೆ ಸೇರ್ಪಡೆಗೊಂಡರು. ಇದೇ ಸಂದರ್ಭ ಬೆಂಗಳೂರಿನ ಇಸ್ರೋ ಸಂಸ್ಥೆ ಭಾರತದ ಮಹತ್ವದ ಚಂದ್ರಯಾನ-2 ಯೋಜನೆಗೆ ಸಿದ್ಧತೆ ನಡೆಸುತ್ತಿದ್ದಂತೆ ಕೃಷ್ಣಮೋಹನ್ ಅವರನ್ನು ಸಂಸ್ಥೆ ಬೆಂಗಳೂರಿನ ಇಸ್ರೋಗೆ ಕರೆಸಿಕೊಂಡಿತ್ತು. ಕೃಷ್ಣಮೋಹನ ಶಾನುಭಾಗ್ ಅವರು ಚಂದ್ರಯಾನ-2 ಉಡಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರ ಚಂದ್ರಯಾನ-3 ಯೋಜನೆಯಲ್ಲಿ ಇವರ ಸೇವೆಯನ್ನು ಬಳಸಿಕೊಳ್ಳಲಾಗಿದೆ. ಚಂದ್ರಯಾನ-3ರ ರಾಕೆಟ್‍ನ ಇಂಧನ ಲೋಡಿಂಗ್ ವಿಭಾಗದ ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಇತರ ಮೂವರು ಸಹೋದ್ಯೋಗಿಗಳು ಕೃಷ್ಣಮೋಹನ ಶಾನುಭಾಗ್ ಜೊತೆಯಲ್ಲಿದ್ದರು. ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ನೇರ ದೃಶ್ಯಾವಳಿಗಳನ್ನು ಮುಂಚೂಣಿ ಸಾಲಲ್ಲಿ ವೀಕ್ಷಿಸಿದ ಇಸ್ರೋ ವಿಜ್ಞಾನಿಗಳ ತಂಡದಲ್ಲಿ ಕೃಷ್ಣಮೋಹನ್ ಒಬ್ಬರಾಗಿದ್ದಾರೆ.
ಪತ್ನಿ ಕವಿತಾ, ಮಕ್ಕಳು: ಶ್ರಾವ್ಯ ಮತ್ತು ಶ್ರೇಯಾ ಇಬ್ಬರು ಪುತ್ರಿಯರು. ಕೃಷ್ಣಮೋಹನ್ ಅವರ ಸಾಧನೆಗೆ ಕಾಸರಗೋಡು ಬಿಇಎಂ ಶಾಲಾ ಆಡಳಿತ ಹಾಗೂ ಶಿಕ್ಷಕ ವರ್ಗ ಸಂತಸ ವ್ಯಕ್ತಪಡಿಸಿದೆ.