ತಿರುವನಂತಪುರ: ರಾಜ್ಯ ಸರ್ಕಾರದ ಉಚಿತ ಓಣಂಕಿಟ್ ವಿತರಣೆ ಬಿಕ್ಕಟ್ಟಿನಲ್ಲಿದೆ. ಉಚಿತ ಓಣಂಕಿಟ್ ವಿತರಣೆ ಇಂದು ಆರಂಭಗೊಂಡಿಲ್ಲ.
ಪಡಿತರ ಅಂಗಡಿಗಳಿಗೆ ಇನ್ನೂ ಕಿಟ್ ಬಾರದ ಕಾರಣ ವಿತರಿಸಲಾಗಿಲ್ಲ. ಅಲ್ಲದೇ ಮಿಲ್ಮಾ ಉತ್ಪನ್ನಗಳ ಕೊರತೆಯೂ ಕಿಟ್ ವಿತರಣೆ ಸ್ಥಗಿತಕ್ಕೆ ಕಾರಣ ಎನ್ನುತ್ತಿದೆ ಆಹಾರ ಇಲಾಖೆ.
ನಿನ್ನೆ ಆಹಾರ ಸಚಿವ ಜಿ.ಆರ್.ಅನಿಲ್ ಕಿಟ್ ವಿತರಣೆಯನ್ನು ಉದ್ಘಾಟಿಸಿದ್ದರು. ಇಂದಿನಿಂದ 27ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಪಡಿತರ ಅಂಗಡಿಗಳ ಮೂಲಕ ಕಿಟ್ ವಿತರಿಸಬೇಕಿತ್ತು. ಆದರೆ ವಿತರಣೆಯ ಕಿಟ್‍ಗಳು ಇನ್ನೂ ಪಡಿತರ ಅಂಗಡಿಗಳಿಗೆ ತಲುಪಿಲ್ಲ. 13 ವಸ್ತುಗಳಲ್ಲಿ ಒಂದಾದ ಮಿಲ್ಮಾ ಪಾಯಸ ಪ್ಯಾಕೆಟ್ ಲಭಿಸಿಲ್ಲ. ಕೂಡಲೇ ಪರಿಹಾರ ಕಂಡುಕೊಳ್ಳದಿದ್ದರೆ ಬೇರೆ ದಾರಿ ಹುಡುಕಬೇಕಾಗುತ್ತದೆ ಎಂದು ಆಹಾರ ಇಲಾಖೆ ಮಿಲ್ಮಾಗೆ ತಿಳಿಸಿದೆ.
ಎಎವೈ (ಹಳದಿ) ಪಡಿತರ ಚೀಟಿದಾರರು ಮತ್ತು ಕಲ್ಯಾಣ ಸಂಸ್ಥೆಗಳ ನಿವಾಸಿಗಳಿಗೆ ಈ ವರ್ಷ ಉಚಿತ ಓಣಂಕಿಟ್ ನೀಡಲಾಗುತ್ತದೆ. ಆರ್ಥಿಕ ಬಿಕ್ಕಟ್ಟನ್ನು ಪರಿಗಣಿಸಿ, ಕಿಟ್ ಈ ಬಾರಿ ಹಳದಿ ಕಾರ್ಡ್ ಹೊಂದಿರುವವರಿಗೆ ಮಾತ್ರ ಸೀಮಿತವಾಗಿದೆ. ಕಲ್ಯಾಣ ಸಂಸ್ಥೆಗಳ ನಾಲ್ಕು ಸದಸ್ಯರಿಗೆ ಒಂದು ಕಿಟ್ ನೀಡಲಾಗುತ್ತದೆ. ತಾಲೂಕು ಸರಬರಾಜು ಅಧಿಕಾರಿಗಳ ಉಸ್ತುವಾರಿಯಲ್ಲಿ ವಿತರಿಸಲು ನಿರ್ಧರಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ನೀಡಿರುವ ಪಟ್ಟಿಯಂತೆ ಇದರ ವಿತರಣೆಯಾಗಲಿದೆ. ಆದರೆ ಕಿಟ್‍ಗೆ ಬೇಕಾದ ವಸ್ತುಗಳನ್ನು ಮಾವೇಲಿ ಸ್ಟೋರ್‍ಗಳಿಗೆ ತಂದು ಅಲ್ಲಿಂದ ಪ್ಯಾಕ್ ಮಾಡಿ ಪಡಿತರ ಅಂಗಡಿಗಳಿಗೆ ತಲುಪಿಸಲಾಗುತ್ತದೆ. ಮಾವೇಲಿ ಸ್ಟೋರ್‍ಗಳಿಗೂ ಇನ್ನೂ ಸರಕು ಲಭಿಸಿಲ್ಲ. ಹೀಗಿರುವಾಗ ನಾಳೆ ಕಿಟ್ ಕೊಡಲು ಸಾಧ್ಯವೇ ಎಂಬ ಅನುಮಾನ ಪಡಿತರ ವ್ಯಾಪಾರಿಗಳಲ್ಲಿ ಮೂಡಿದೆ.
ಭಾನುವಾರ ಸೇರಿದಂತೆ ಇನ್ನೆರಡು ದಿನಗಳಲ್ಲಿ ಓಣಂ ಸನಿಹದಲ್ಲಿರುವಾಗ ಕಿಟ್ ವಿತರಣೆ ಪೂರ್ಣಗೊಳ್ಳುವುದೇ ಎಂಬ ಅನುಮಾನವೂ ಕಾಡುತ್ತಿದೆ. ಮತ್ತು ಓಣಂ ಮೊದಲು ಪಾವತಿಸಬಹುದೇ ಎಂಬ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ಬಟ್ಟೆಯ ಚೀಲಗಳು ಸೇರಿದಂತೆ ಹದಿನಾಲ್ಕು ರೀತಿಯ ಆಹಾರ ಉತ್ಪನ್ನಗಳಿವೆ. ಕಿಟ್‍ನಲ್ಲಿ ಚಹಾಪುಡಿ, ಕಡಲೆ, ಶ್ಯಾವಿಗೆ ಪಾಯಸ ಮಿಕ್ಸ್, ತುಪ್ಪ, ಗೋಡಂಬಿ, ತೆಂಗಿನ ಎಣ್ಣೆ, ಸಾಂಬಾರ್ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಧನಿಯಾ ಪುಡಿ, ಪಚ್ಚೆಹೆಸರು, ತೊಗರಿ ಬೇಳೆ, ಬೆಲ್ಲ ಮತ್ತು ಪುಡಿ ಉಪ್ಪು ಇರಲಿದೆ.