ತಿರುವನಂತಪುರಂ: ಕೇರಳದ ರಾಷ್ಟ್ರೀಯ ಹೆದ್ದಾರಿಗೆ ಭೂಸ್ವಾಧೀನಕ್ಕೆ ತಗಲುವ ವೆಚ್ಚವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸಬೇಕು ಎಂದು ಕೇಂದ್ರ ಮೇಲ್ಮೈ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿ ಕೋರಿದ್ದಾರೆ.
ಗಡ್ಕರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಿಣರಾಯಿ ಈ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳ ನಿರ್ಮಾಣ ಸಾಮಗ್ರಿಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಪಾಲು ಮತ್ತು ರಾಯಧನವನ್ನು ಕೇರಳ ಮನ್ನಾ ಮಾಡಬಹುದು ಎಂದು ನಿತಿನ್ ಗಡ್ಕರಿ ಅವರಿಗೆ ಪಿಣರಾಯಿ ವಿಜಯನ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿಗೆ ಭೂಸ್ವಾಧೀನಕ್ಕೆ ತಗಲುವ ವೆಚ್ಚದಲ್ಲಿ ಕೇರಳದ ಶೇ.25ರಷ್ಟು ಪಾಲು ಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದರು. ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸಬೇಕೆಂದು ಕೇರಳ ಈಗಾಗಲೇ ಆಗ್ರಹಿಸಿತ್ತು. ಇದರೊಂದಿಗೆ ತಿರುವನಂತಪುರಂನ ಹೊರ ವರ್ತುಲ ರಸ್ತೆ (ಒಆರ್‍ಆರ್) ಯೋಜನೆಯ ಭೂಸ್ವಾಧೀನ ವೆಚ್ಚದ ರಾಜ್ಯದ ಪಾಲನ್ನು ಮನ್ನಾ ಮಾಡಲು ರಾಜ್ಯ ಸರ್ಕಾರವು ಮನವಿ ಮಾಡಿದೆ.ಹೊರ ವರ್ತುಲ ರಸ್ತೆ ಯೋಜನೆಗೆ 50 ಪ್ರತಿಶತ ಭೂ ಸ್ವಾಧೀನ ವೆಚ್ಚವನ್ನು ಹಂಚಿಕೊಳ್ಳಲು ರಾಜ್ಯವು ಈ ಹಿಂದೆ ಒಪ್ಪಿಕೊಂಡಿತ್ತು. ಸರ್ವೀಸ್ ರಸ್ತೆಯ 100 ಪ್ರತಿಶತ ಭೂ ಸ್ವಾಧೀನ ವೆಚ್ಚ ಸೇರಿದಂತೆ ಒಆರ್‍ಆರ್ ಯೋಜನೆಯ ನಿರ್ಮಾಣ ಸಾಮಗ್ರಿಗಳ ಮೇಲಿನ ಜಿಎಸ್‍ಟಿ ಪಾಲು ಮತ್ತು ರಾಯಧನವನ್ನು ಮನ್ನಾ ಮಾಡಲು ಸಿದ್ಧ ಎಂದು ರಾಜ್ಯವು ಈಗ ಕೇಂದ್ರ ಸಚಿವಾಲಯಕ್ಕೆ ತಿಳಿಸಿದೆ. ಬದಲಾಗಿ ಯೋಜನೆಗೆ ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸಬೇಕು. ಸಭೆಯಲ್ಲಿ ಕೇಂದ್ರ ಸಚಿವರಿಂದ ಮುಖ್ಯಮಂತ್ರಿಗಳಿಗೆ ಯಾವುದೇ ಭರವಸೆ ಸಿಗದಿದ್ದರೂ, ಭೂಸ್ವಾಧೀನ ವೆಚ್ಚದಲ್ಲಿ ಸಡಿಲಿಕೆ ಸಿಗುವ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರವಿದೆ.