ಇಸ್ಲಾಮಾಬಾದ್: ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಸೆನೆಟರ್ ಅನ್ವಾರ್-ಉಲ್-ಹಕ್ ಕಾಕರ್ ಅವರನ್ನು ಶನಿವಾರ ನೇಮಕ ಮಾಡಲಾಗಿದೆ.
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದ ಆಡಳಿತ ನಡೆಸಲು ಮತ್ತು ಸಾರ್ವತ್ರಿಕ ಚುನಾವಣೆಗಳ ಮೇಲ್ವಿಚಾರಣೆಗಾಗಿ ಅನ್ವರ್-ಉಲ್-ಹಕ್ ಕಾಕರ್ ಅವರನ್ನು ನೇಮಕ ಮಾಡಲಾಗಿದೆ.
ನಿರ್ಗಮಿತ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ವಿರೋಧ ಪಕ್ಷದ ನಾಯಕ ರಾಜಾ ರಿಯಾಜ್ ಹಂಗಾಮಿ ಪ್ರಧಾನಿ ಆಯ್ಕೆ ಕುರಿತು ಎರಡು ಸುತ್ತಿನ ಚರ್ಚೆಯ ನಂತರ ಕಾಕರ್ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ.
ಬಲೂಚಿಸ್ತಾನ್ ಅವಾಮಿ ಪಾರ್ಟಿ(ಬಿಎಪಿ)ಗೆ ಸೇರಿದ ಸಂಸದ ಕಾಕರ್ ಅವರು ಮುಂದಿನ ಚುನಾವಣೆವರೆಗೆ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ನಿರ್ಗಮಿತ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅವಧಿಗೆ ಮೂರು ದಿನ ಮೊದಲು ಆಗಸ್ಟ್ 9 ರಂದು ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸುವಂತೆ ಶಿಫಾರಸು ಮಾಡಿದ್ದರು. ಅವರ ಶಿಫಾರಸಿನ ಮೇರೆಗೆ ಬುಧವಾರ ಸಂಜೆ ಸಂಸತ್ ವಿಸರ್ಜಿಸಿದ್ದು, ಸಂವಿಧಾನದ ಪ್ರಕಾರ, ಮುಂದಿನ 90 ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.