ತಿರುವನಂತಪುರ: 'ಅಭಿವೃದ್ಧಿ ಹೊಂದಿದ ದೇಶಗಳ ಸಂಶೋಧನಾ ಸಂಸ್ಥೆಗಳಲ್ಲಿನ ವಿಜ್ಞಾನಿಗಳು ಪಡೆಯುವ ಸಂಬಳದ ಐದನೇ ಒಂದರಷ್ಟು ವೇತನ ಪಡೆಯುತ್ತಿದ್ದರೂ, ಇಸ್ರೊ ವಿಜ್ಞಾನಿಗಳು ಈ ಐತಿಹಾಸಿಕ ಯಶಸ್ಸು ಸಾಧಿಸಿದ್ದಾರೆ' ಎಂದು ಇಸ್ರೊ ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ಹೇಳಿದ್ದಾರೆ.
'ಇಸ್ರೊ ವಿಜ್ಞಾನಿಗಳು ಅಂತರಿಕ್ಷ ಕಾರ್ಯಕ್ರಮಗಳನ್ನು ಕಡಿಮೆ ವೆಚ್ಚದಲ್ಲಿ ಅನುಷ್ಠಾನಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವುದಕ್ಕೆ ಅವರು ಕಡಿಮೆ ವೇತನ ಪಡೆಯುತ್ತಿರುವುದು ಕೂಡ ಒಂದು ಕಾರಣ' ಎಂದಿದ್ದಾರೆ.
'ಚಂದ್ರಯಾನ-3'ರ ಯಶಸ್ಸಿನ ಹಿನ್ನೆಲೆಯಲ್ಲಿ ಪಿಟಿಐ ಜೊತೆ ಮಾತನಾಡಿದ ಅವರು, 'ಇಸ್ರೊ ವಿಜ್ಞಾನಿಗಳಲ್ಲಿ ಯಾರೂ ಲಕ್ಷಾಧೀಶರಿಲ್ಲ. ಎಲ್ಲರೂ ಸಾಧಾರಣ ಜೀವನ ನಡೆಸುತ್ತಾರೆ' ಎಂದರು.
'ಸಂಸ್ಥೆಯ ವಿಜ್ಞಾನಿಗಳು ಹಾಗೂ ಇತರ ಸಿಬ್ಬಂದಿ ಹಣದ ಹಿಂದೆ ಬಿದ್ದವರಲ್ಲ. ಸಂಸ್ಥೆ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಅವರು ಆಸಕ್ತಿ ಹಾಗೂ ಶ್ರದ್ಧೆ ಹೊಂದಿರುವ ಕಾರಣದಿಂದಲೇ ಈ ಮಹತ್ತರ ಸಾಧನೆ ಸಾಧ್ಯವಾಗಿದೆ' ಎಂದು ಹೇಳಿದರು.