ಪೆರ್ಲ: ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ವಿಕಸನಗೊಳಿಸುವಲ್ಲಿ ಹೆತ್ತವರು ಮತ್ತು ಶಿಕ್ಷಕರ ಪಾತ್ರ ಮಹತ್ತರವಾದುದು ಎಂದು ಏಶಿಯನ್ ಗೇಮ್ಸ್ ಕಬಡ್ಡಿಯಲ್ಲಿ ಚಿನ್ನದ ಪದಕ ವಿಜೇತ, ಭಾರತೀಯ ಕಬಡ್ಡಿ ತಂಡದ ಮಾಜಿ ಕಪ್ತಾನ ಜಗದೀಶ್ ಕುಂಬಳೆ ತಿಳಿಸಿದ್ದಾರೆ.
ಅವರು ಸ್ವಾತಂತ್ರ್ಯೋತ್ಸವ ಅಂಗವಾಗಿ ಪೆರ್ಲ ಶ್ರೀ ಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲಾ ಗ್ರಂಥಾಲಯ ಉದ್ಘಾಟನೆ, ಶಾಲಾ ಮಕ್ಕಳಿಗಾಗಿ ಸಜ್ಜುಗೊಳಿಸಲಾದ ಸ್ಪೋಟ್ರ್ಸ್ ಜೆರ್ಸಿ ಅನಾವರಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರೌಢಶಾಲಾ ಕಲಾನಿಲಯದಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಪ್ರಬಂಧಕ ಪಿ.ಎಸ್ ವಿಶ್ವಾಮಿತ್ರ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪಿಟಿಎ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಕವಯಿತ್ರಿ ಅನ್ನಪೂರ್ಣ ಬೆಜಪ್ಪೆ, ಸ್ಪೋಟ್ರ್ಸ್ ಕಾರ್ಯದರ್ಶಿ ಹಮೀದ್ ಕುರಡ್ಕ, ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಭಟ್, ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಶಾಲಾ ಪಿಟಿಎ ಸಮಿತಿ ಪದಾಧಿಕಾರಿಗಳು, ಶಿಕ್ಷಕರು, ಉಪಸ್ಥಿತರಿದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿಶಿಷ್ಟ ಕಾರ್ಯಕ್ರಮ:
ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕ್ರೀಡೆಯಲ್ಲಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಶಾಲೆಯಲ್ಲಿ ಪ್ರತ್ಯೇಕ ಸ್ಪೋಟ್ರ್ಸ್ ಸಮಿತಿ ರಚಿಸಿ, ಈ ಮೂಲಕ ಕಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳ ಬಗ್ಗೆ ತರಬೇತಿ, ಮಕ್ಕಳಲ್ಲಿ ಓದುವಿಕೆ ಬಗ್ಗೆ ಆಸಕ್ತಿ ಮೂಡಿಸಲು ಸುಸಜ್ಜಿತ ಗ್ರಂಥಾಲಯ ಸ್ಥಾಪಿಸಲಾಗಿದೆ. ಮಕ್ಕಳಿಗೆ ಕ್ರೀಡಾಜೆರ್ಸಿ ವಿತರಿಸುವುದರ ಜತೆಗೆ ಮಕ್ಕಳಿಗೆ ಕಬಡ್ಡಿ ತರಬೇತಿ ನೀಡಿ ಜಗದೀಶ್ ಕುಂಬಳೆ ಅವರು ಯೋಜನೆಗಳಿಗೆ ಚಾಲನೆ ನೀಡಿದರು. ಸ್ವಾತಂತ್ರ್ಯೋತ್ಸವ ಅಂಗವಾಗಿ ಮಕ್ಕಳ ಆಕರ್ಷಕ ಮೆರವಣಿಗೆ ನಡೆಯಿತು.