ಇಂಫಾಲ್: ಹಿಂಸಾಚಾರದ ಸಂದರ್ಭದಲ್ಲಿ ನಡೆದ ಕುಕಿ- ಮೈತೇಯಿ ದಂಪತಿಯ ಏಳು ವರ್ಷದ ಮಗನ ಸಜೀವ ದಹನ ಪ್ರಕರಣ ಸೇರಿದಂತೆ 20 ಪ್ರಕರಣಗಳನ್ನು ಮಣಿಪುರದ ಪೊಲೀಸರು ಸಿಬಿಐಗೆ ಹಸ್ತಾಂತರಿಸಿದ್ದಾರೆ.
ಬಾಲಕನ ಜೊತೆ ಆತನ ತಾಯಿ ಹಾಗೂ ಚಿಕ್ಕಮ್ಮನನ್ನೂ ದಹಿಸಲಾಗಿತ್ತು. ಈ ಬಾಲಕನ ತಾಯಿ ಮೈತೇಯಿ ಸಮುದಾಯಕ್ಕೆ ಸೇರಿದ್ದರೆ, ತಂದೆ ಕುಕಿ ಸಮುದಾಯದವರು.
ಹಿಂಸಾಚಾರದಲ್ಲಿ ತಲೆಗೆ ಗುಂಡೇಟು ಬಿದ್ದು ಗಾಯಗೊಂಡಿದ್ದ ಬಾಲಕ ತಾನ್ಸಿಂಗ್ ಹ್ಯಾಂಗ್ಸಿಂಗ್‌ನನ್ನು ಜೂನ್ 4ರಂದು ಆತನ ತಾಯಿ ಮೀನಾ ಹ್ಯಾಂಗ್ಸಿಂಗ್ (45) ಹಾಗೂ ಚಿಕ್ಕಮ್ಮ ಲಿಡಿಯಾ ಲೌರೆಂಬಮ್ (37) ಅವರು ಪೊಲೀಸರ ಬೆಂಗಾವಲಿನೊಂದಿಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದರು. ಆ ವೇಳೆ, ಆಂಬುಲೆನ್ಸ್‌ಗೆ ಅಡ್ಡಗಟ್ಟಿದ ಕುಕಿ ಜನರ ಗುಂಪೊಂದು ವಾಹನಕ್ಕೆ ಬೆಂಕಿ ಹಚ್ಚಿತ್ತು.
ಲ್ಯಾಂಫೆಲ್ ಠಾಣೆಯಲ್ಲಿ ದಾಖಲಾದ ಒಂದು ಎಫ್‌ಐಆರ್ ಮತ್ತು ಬಾಲಕನ ತಂದೆ ಜೋಶುವಾ ಹ್ಯಾಂಗ್ಸಿಂಗ್ ಅವರು ಕಾಂಗ್‌ಪೋಕ್‌ಪಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಮತ್ತೊಂದು ಎಫ್‌ಐಆರ್, ಒಟ್ಟು ಎರಡು ಎಫ್‌ಐಆರ್‌ಗಳನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ.
ಲ್ಯಾಂಫೆಲ್ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದರೆ, ಕಾಂಗ್‌ಪೋಕ್‌ಪಿ ಪೊಲೀಸ್ ಠಾಣೆಯಲ್ಲಿ ಗುಂಪಿನ ಹಠಾತ್ ಪ್ರಚೋದನೆಯ ಗಲಭೆಯಲ್ಲಿ ನಡೆದ ಹತ್ಯೆ ಪ್ರಕರಣದ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ತಾನ್ಸಿಂಗ್‌ನನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಮೇಲೆ ಗುಂಪು ದಾಳಿ ನಡೆದಾಗ ಆತನ ತಾಯಿ ಮತ್ತು ಚಿಕ್ಕಮ್ಮ (ಇಬ್ಬರೂ ಮೈತೇಯಿ ಕ್ರೈಸ್ತರು) ಅವರಲ್ಲದೆ ಚಾಲಕ ಮತ್ತು ಒಬ್ಬ ನರ್ಸ್ ಕೂಡ ಅದರಲ್ಲಿದ್ದರು. ಈ ದಾಳಿಯಿಂದ ಚಾಲಕ ಮತ್ತು ನರ್ಸ್ ಪಾರಾಗಿದ್ದರು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಉದ್ರಿಕ್ತರನ್ನು ಹಿಮ್ಮೆಟ್ಟಿಸುವಷ್ಟರಲ್ಲಿ ಮೂವರ ದಹನವಾಗಿತ್ತು.
'ನಾವು ಹೊರಗೆ ಬರುವವರೆಗೆ ಕಾಯಿರಿ, ನಂತರ ಆಂಬುಲೆನ್ಸ್‌ಗೆ ಬೇಕಾದರೆ ಬೆಂಕಿ ಹಚ್ಚಿ' ಎಂದು ತಾನ್ಸಿಂಗ್‌ನ ತಾಯಿ ಮತ್ತು ಚಿಕ್ಕಮ್ಮ ಪರಿ ಪರಿಯಾಗಿ ಬೇಡಿದರೂ ಉದ್ರಿಕ್ತರು ಅವರನ್ನು ವಾಹನದಿಂದ ಕೆಳಗಿಳಿಯಲು ಅವಕಾಶ ಕೊಡದೆ ಬೆಂಕಿ ಹಚ್ಚಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.