ಬದಿಯಡ್ಕ :'ಜಿಲ್ಲೆಯ ಮಕ್ಕಳಲ್ಲಿ ಕನ್ನಡ ಪ್ರಜ್ಞೆ ಅರಳಬೇಕಾದರೆ, ಮೊದಲು ಅದು ಮಕ್ಕಳ ಹಿರಿಯರಲ್ಲಿ ಅರಳಬೇಕು. ಕಾಸರಗೋಡಿನ ಕನ್ನಡಿಗರಿಗೆ ಕೇರಳದಲ್ಲಿ ಅನೇಕ ಸವಲತ್ತುಗಳಿವೆ. ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲೂ ಕೂಡಾ ವಿಶೇಷವಾಗಿ ಗಡಿನಾಡ ಕನ್ನಡಿಗರ ಮೀಸಲಾತಿ ಇದೆ. ಅದನ್ನು ಪಡೆದು ಗಳಿಸಿಕೊಳ್ಳಬೇಕು. ಕನ್ನಡದ ಸಂಸ್ಕøತಿಯನ್ನು ಯಾವತ್ತೂ ಬಿಡಬಾರದು. ಕನ್ನಡಿಗರನ್ನು ಪರಸ್ಪರ ಆಧರಿಸಿಕೊಂಡು ಕನ್ನಡಿಗರೇ ರಕ್ಷಿಸಿಕೊಳ್ಳಬೇಕು' ಎಂದು ಶಿಕ್ಷಕ ರಾಜೇಶ್ ಎಸ್ ಉಬ್ರಂಗಳ ಹೇಳಿದರು.
ಅವರು ನೀರ್ಚಾಲು ಸಮೀಪದ ಕುಂಟಿಕಾನ ಎಎಸ್‍ಬಿ ಶಾಲೆಯಲ್ಲಿ ಭಾನುವಾರ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭುವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆಯುತ್ತಿರುವ ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪರ್ಯಟನೆಯ 6ನೇ ಸರಣಿ ಕಾರ್ಯಕ್ರಮದಲ್ಲಿ 'ಕನ್ನಡ ಭಾಷಾ ಪ್ರಜ್ಞೆ ಬೆಳೆಸುವುದು ಹೇಗೆ' ಎಂಬ ಕುರಿತು ವಿಚಾರ ಮಂಡಿಸಿ ಮಾತನಾಡಿದರು.
'ಕನ್ನಡ ಭಾಷೆಯಲ್ಲಿ ಬಹುಮುಖಿ ಸಾಹಿತ್ಯ ಹಾಗೂ ಸಂಸ್ಕøತಿ ಇದೆ. ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿ ಡಿಜಿಟಲ್ ಸಾಹಿತ್ಯ ಇನ್ನಷ್ಟೂ ವಿಸ್ತಾರವಾಗಬೇಕು. ಕಾಸರಗೋಡಿನ ಮೂಲದಲ್ಲಿ ಕನ್ನಡದ ಶಕ್ತಿ ಇನ್ನೂ ಕೂಡಾ ಗಟ್ಟಿಯಾಗಿಯೇ ಇದೆ. ಹಿರಿಯರು ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಹಾಗೂ ಪ್ರೀತಿ ಮೂಡಿಸಬೇಕು' ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ರಂಗಸಿರಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ, ಶಿಕ್ಷಕಿ ಪುಂಡೂರು ಪ್ರಭಾವತಿ ಕೆದಿಲಾಯ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಸಂಘಟಕ ಕುಂಟಿಕಾನ ವೆಂಕಟೇಶ್ವರ ಭಟ್ಟರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಕುಂಟಿಕಾನ ಶಾಲಾ ಪ್ರಬಂಧಕ ಶಂಕರನಾರಾಯಣ ಶರ್ಮ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕ ವೆಂಕಟರಾಜ ವಿ, ನಿವೃತ್ತ ಶಿಕ್ಷಕ ದಿನೇಶ್ ಬೊಳುಂಬು, ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ ಅಬ್ಬಾಸ್ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಟಿ ತಿಂಗಳ ವಿಶೇಷ ದೈವವಾದ ಆಟಿಕೆಳೆಂಜನ ಪಾಡ್ದನ ಸಹಿತ ಪ್ರಾತ್ಯಕ್ಷಿಕೆ ನಡೆಯಿತು. ನಿವೃತ್ತ ಶಿಕ್ಷಕ, ಹಿರಿಯ ಸಾಹಿತಿ ಭಾಸ್ಕರ ಅಡ್ವಳ ಅರು ಆಟಿ ಆಚರಣೆಯ ಕುರಿತು ವಿಶೇಷ ಕಾರ್ಯಾಗಾರ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಮಕ್ಕಳು, ಶಿಕ್ಷಕರು, ಪೋಷಕರು ಭಾಗವಹಿಸಿದ್ದರು. ಡಾ. ಶ್ರೀಶ ಕುಮಾರ ಪಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿರಾಜ್ ಅಡೂರು ವಂದಿಸಿದರು.