ತಿರುವನಂತಪುರಂ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ (ವಿಎಸ್‌ಎಸ್‌ಸಿ) ತಾಂತ್ರಿಕ ಸಿಬ್ಬಂದಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ ಆರೋಪದ ಮೇಲೆ ಹರಿಯಾಣದ ಮತ್ತಿಬ್ಬರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಇಬ್ಬರನ್ನು ಬಂಧಿಸಲಾಗಿತ್ತು.
ಇತ್ತೀಚಿಗೆ ಸೆರೆಯಾಗಿರುವ ಇಬ್ಬರನ್ನು ಇಲ್ಲಿನ ಮೆಡಿಕಲ್ ಕಾಲೇಜು ಪೊಲೀಸ್ ಠಾಣೆಯಲ್ಲಿ ಕಳೆದ (ಸೋಮವಾರ) ರಾತ್ರಿ ವಿಚಾರಣೆಗೆ ಒಳಪಡಿಸಲಾಗಿದೆ. 'ಬಂಧಿತರು ಪರೀಕ್ಷೆ ವಂಚನೆಯಲ್ಲಿ ಪಾಲ್ಗೊಂಡ ಒಂದೇ ತಂಡದವರು' ಎಂದು ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೋದ ಬಾಹ್ಯಾಕಾಶ ಯೋಜನೆಗಳ ನಿರ್ವಹಣೆಯ ಪ್ರಮುಖ ಕೇಂದ್ರವಾಗಿರುವ ವಿಎಸ್‌ಎಸ್‌ಸಿ, ತಾಂತ್ರಿಕ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು. ಕೇರಳದ ಹತ್ತು ಕೇಂದ್ರಗಳಲ್ಲಿ ಮಾತ್ರವೇ ಪರೀಕ್ಷೆ ನಿಗದಿಯಾಗಿತ್ತು.
ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿರುವ ಕುರಿತು ಹರಿಯಾಣದಿಂದ ಅಪರಿಚಿತ ಕರೆ ಬಂದಿತ್ತು.
ಇದರ ಬೆನ್ನಲ್ಲೇ ಭಾನುವಾರ ಎರಡು ಪ್ರತ್ಯೇಕ ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ನೈಜ ಅಭ್ಯರ್ಥಿಯ ಬದಲಿಗೆ ಪರೀಕ್ಷೆಗೆ ಹಾಜರಾಗಿದ್ದ ಬಂಧಿತರು, ಮೊಬೈಲ್ ಫೋನ್ ಕ್ಯಾಮೆರಾ ಹಾಗೂ ಬ್ಲೂಟೂತ್ ಉಪಕರಣಗಳನ್ನು ಬಳಸಿ ಉತ್ತರ ಬರೆಯುತ್ತಿದ್ದದ್ದು ಪತ್ತೆಯಾಗಿತ್ತು.
ಪೊಲೀಸ್ ಇಲಾಖೆ ಹಾಗೂ ವಿಎಸ್‌ಎಸ್‌ಸಿ ಸದ್ಯ ಪೂರ್ಣ ಪ್ರಮಾಣದ ತನಿಖೆ ಆರಂಭಿಸಿವೆ. ತಿರುವನಂತಪುರಂನ ವಿವಿಧ ಕೇಂದ್ರಗಳಲ್ಲಿ ನಡೆಯುತ್ತಿದ್ದ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ.
ಹರಿಯಾಣದವರೇ ಆದ 400 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿನ ತರಬೇತಿ ಕೇಂದ್ರಗಳು ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ಇದೆ. ತನಿಖೆಗಾಗಿ ಹರಿಯಾಣಕ್ಕೆ ತಂಡವನ್ನು ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮರುಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ವಿಎಸ್‌ಎಸ್‌ಸಿ ತಿಳಿಸಿದೆ.