ವಿಶ್ವಸಂಸ್ಥೆ: ನ್ಯಾಟೊ ಕ್ಯಾಲಿಬರ್ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ಮತ್ತು ಅಲ್‌ಕೈದಾ ಹಾಗೂ ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನದಂತಹ ಗುಂಪುಗಳ ಜತೆಗೆ ಸಂಯೋಜನೆಗೊಂಡಿರುವ ಐಎಸ್‌ಐಎಲ್-ಕೆ ಸಂಘಟನೆಗೆ ವರ್ಗಾವಣೆಯಾಗಿವೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದ್ದು, ಸದಸ್ಯ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.
2021ರಲ್ಲಿ ಅಫ್ಗಾನಿಸ್ತಾನದಲ್ಲಿ ಆಡಳಿತ ಚುಕ್ಕಾಣಿಯನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ, ಅಫ್ಗಾನಿಸ್ತಾನದೊಳಗೆ ಮತ್ತು ನೆರೆಯ ದೇಶಗಳಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಇತರ ಮಿಲಿಟರಿ ಉಪಕರಣಗಳ ಪ್ರಸರಣ ಹೆಚ್ಚಿರುವ ಬಗ್ಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ ಎಂದು ಈ ವಾರ ಇಲ್ಲಿ ಬಿಡುಗಡೆ ಮಾಡಲಾದ ವರದಿಯಲ್ಲಿ ಹೇಳಿದೆ.
ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಐಎಸ್‌ಐಎಲ್‌ನಿಂದ (ದಾಯೆಸ್) ಇರುವ ಬೆದರಿಕೆಯ ಕುರಿತು ಮಹಾಪ್ರಧಾನ ಕಾರ್ಯದರ್ಶಿಯವರು ಸಿದ್ಧಪಡಿಸಿರುವ 17ನೇ ವರದಿಯಲ್ಲಿ ಅಫ್ಗಾನಿಸ್ತಾನ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಶಸ್ತ್ರಾಸ್ತ್ರಗಳ ಪ್ರಸರಣದ ಬಗ್ಗೆ ಕಳವಳ ವ್ಯಕ್ತವಾಗಿದೆ. ನಿರ್ದಿಷ್ಟವಾಗಿ ಐಎಸ್‌ಐಎಲ್ ಮತ್ತು ಅದರ ಪ್ರಾದೇಶಿಕ ಅಂಗಸಂಸ್ಥೆಗಳು ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಲಘು ಶಸ್ತ್ರಾಸ್ತ್ರಗಳು, ಡ್ರೋನ್ ವ್ಯವಸ್ಥೆಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿವೆ ಎಂದೂ ವರದಿಯಲ್ಲಿ ಹೇಳಿದೆ.
ನ್ಯಾಟೊ ಕ್ಯಾಲಿಬರ್ ಶಸ್ತ್ರಾಸ್ತ್ರಗಳು ಸಾಮಾನ್ಯವಾಗಿ ಈ ಹಿಂದಿನ ಅಫ್ಗಾನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳ ಬಳಿ ಇದ್ದವು. ಇದರಿಂದ ಈಗ ಇವು ತಾಲಿಬಾನ್ ಮತ್ತು ಅಲ್‌ಕೈದಾ, ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನ (ಟಿಟಿಪಿ), ಈಸ್ಟರ್ನ್ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್ ಅಥವಾ ತುರ್ಕಿಸ್ತಾನ್ ಇಸ್ಲಾಮಿಕ್ ಪಾರ್ಟಿ (ಇಟಿಐಎಂ/ಟಿಐಪಿ) ಗುಂಪುಗಳ ಜತೆಗೆ ಸಂಯೋಜನೆಗೊಂಡಿರುವ ಐಎಸ್‌ಐಎಲ್-ಕೆಗೆ ವರ್ಗಾವಣೆಯಾಗಿವೆ ಎಂದು ವರದಿಯಲ್ಲಿ ಹೇಳಿದೆ.