ಕಾಸರಗೋಡು: ಗಣಪತಿ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕೆರಳದ ವಿಧಾನಸಭಾ ಸ್ಪೀಕರ್ ಎ.ಎನ್. ಶಂಸೀರ್ ವಿರುದ್ದ ಆಗಸ್ಟ್ 2ರಂದು ರಾಜ್ಯಾದ್ಯಂತ ಆಚಾರ ಸಂರಕ್ಷಣಾ ದಿನವನ್ನಾಗಿ ಆಚರಿಸುವಂತೆ ಕೇರಳದ ಪ್ರಮುಖ ಸಮುದಾ ಸಂಘಟನೆ ನಾಯರ್ಸ್ ಸರ್ವೀಸ್ ಸೊಸೈಟಿ(ಎನ್ನೆಸ್ಸೆಸ್) ಕರೆನೀಡಿದೆ. ಪ್ರತಿ ಮನೆಯವರು ಸನಿಹದ ಗಣಪತಿ ದೇಗುಲಕ್ಕೆ ತೆರಳಿ ಬಲಿವಾಡು ಸಮರ್ಪಿಸಿ ಪ್ರಾರ್ಥಿಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಎನ್ನೆಸ್ಸೆಸ್‍ನ ಎಲ್ಲ ತಾಲೂಕು ಘಟಕಗಳಿಗೂ ಮಾಹಿತಿ ನೀಡಲಾಗಿದೆ.
ಹಿಂದೂಗಳ ದೈವ ವಿಶ್ವಾಸಕ್ಕೆ ಧಕ್ಕೆಯುಂಟುಮಾಡುವ ರೀತಿಯಲ್ಲಿ ಸ್ಪೀಕರ್ ವರ್ತಿಸಿದ್ದಾರೆ. ಇವರು ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ತಮ್ಮ ಹೇಳಿಕೆ ಹಿಂದಕ್ಕೆ ಪಡೆದು, ಈ ಬಗ್ಗೆ ಕ್ಷಮೆ ಕೇಳುವಂತೆ ಎನ್ನೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ನಾಯರ್ ಇತ್ತೀಚೆಗೆ ಹೇಳಿಕೆ ಬಿಡುಗಡೆಮಾಡಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ, ಸರ್ಕಾರ ನಿರ್ಲಕ್ಷಿಸಿತ್ತು. ಈ ನಿಟ್ಟಿನಲ್ಲಿ ಬಹಿರಂಗ ಆಹ್ವಾನ ನೀಡಿ, ಶಂಸೀರ್ ಹೇಳಿಕೆ ವಿರುದ್ಧ ಗಣಪತಿ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಸುಚಿಸಲಾಗಿದೆ. ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸಭೆಯನ್ನು ಮುನ್ನಡೆಸಲು ಇಂತಹ ವ್ಯಕ್ತಿಗಳು ಅರ್ಹರಲ್ಲ. ಸ್ಪೀಕರ್ ಹೇಳಿಕೆ ಎಲ್ಲೆ ಮೀರಿದ್ದಾಗಿದ್ದು, ಯಾವುದೇ ವ್ಯಕ್ತಿಗೆ ಇನ್ನೊಂದು ಧರ್ಮದ ಆಚಾರ ಪ್ರಶ್ನಿಸುವ ಅವಕಾಶವಿಲ್ಲ. ಈ ಹೇಳಿಕೆ ಅಂಗೀಕರಿಸಲು ಸಆಧ್ಯವಿಲ್ಲ ಎಂದೂ ಸುಕುಮಾರನ್ ನಾಯರ್ ತಿಳಿಸಿದ್ದಾರೆ.
ಕೇರಳದ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಸಮಾರಂಭದಲ್ಲಿ ನೂರಾರು ವಿದ್ಯಾರ್ಥಿಗಳ ಎದುರು ಗಣಪತಿ ಎಂಬುದು 'ಕಟ್ಟು ಕತೆ'ಯಾಗಿರುವುದಾಗಿ ತಿಳಿಸಿದ್ದು, ಪುರಾಣದ ಬಗ್ಗೆಯೂ ಅಪಹಾಸಯ ನಡೆಸಿದ್ದರು.