ನವದೆಹಲಿ: ವಿರೋಧ ಪಕ್ಷಗಳ ಹಲವು ನಾಯಕರಿಂದ ಸದನ ನಾಯಕ ಪೀಯೂಷ್ ಗೋಯಲ್ ವಿರುದ್ದ ಹಕ್ಕುಚ್ಯುತಿ ಮಂಡನೆ ಹಾಗೂ ನಾಟಕೀಯ ಬೆಳವಣಿಗೆ ಬಳಿಕ ಟಿಎಂಸಿ ಸಂಸದ ಡೆರೆಕ್ ಒಬ್ರಯಾನ್ ಅವರು ಕಲಾಪಕ್ಕೆ ಹಾಜರಾಗಲು ಅನುಮತಿ ನೀಡಿದ್ದಕ್ಕೆ ರಾಜ್ಯಸಭೆ ಮಂಗಳವಾರ ಸಾಕ್ಷಿಯಾಯಿತು.
'ವಿರೋಧ ಪಕ್ಷಗಳ ಸಂಸದರು ವಿಶ್ವಾಸದ್ರೋಹಿಗಳು ಎಂಬುದಾಗಿ ಸದನ ನಾಯಕ ಪೀಯೂಷ್ ಗೋಯಲ್ ಟೀಕಿಸಿದ್ದಕ್ಕಾಗಿ, ಅವರ ವಿರುದ್ಧ ಸಭಾಪತಿ ಅವರಿಗೆ 'ಇಂಡಿಯಾ' ಅಂಗಪಕ್ಷಗಳ ನಾಯಕರು ಹಕ್ಕುಚ್ಯುತಿ ನೋಟಿಸ್ ನೀಡಿದ್ದೇವೆ' ಎಂದು ಕಾಂಗ್ರೆಸ್ ಸಮಸದ ಜೈರಾಮ್ ರಮೇಶ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
'ಅವರು ಸದನದಲ್ಲಿ ಕ್ಷಮೆ ಯಾಚಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
ನಂತರ ಸದನದಲ್ಲಿ ಮಾತನಾಡಿದ ಗೋಯಲ್, 'ನಾನು ಬಳಸಿದ ಪದಗಳಲ್ಲಿ ಅಸಂಸದೀಯವಾದವು ಇದ್ದಲ್ಲಿ, ಅವುಗಳನ್ನು ಹಿಂಪಡೆಯುವೆ. ಅಂತಹ ಪದಗಳಿದ್ದಲ್ಲಿ ಕಡತದಿಂದ ತೆಗೆಯಬೇಕು' ಎಂದು ಗೋಯಲ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, 'ಕಡತಗಳನ್ನು ಪರಿಶೀಲನೆ ಮಾಡುವೆ. ಅಸಂಸದೀಯ ಪದಗಳು ಕಂಡುಬಂದಲ್ಲಿ ಅವುಗಳನ್ನು ಕಡತದಿಂದ ತೆಗೆದು ಹಾಕುವೆ' ಎಂದರು.
ಕಾಂಗ್ರೆಸ್, ಟಿಎಂಸಿ, ಎಎಪಿ, ಆರ್‌ಜೆಡಿ, ಡಿಎಂಕೆ, ಜೆಡಿಯು, ಎನ್‌ಸಿಪಿ ಹಾಗೂ ಎಡಪಕ್ಷಗಳು ಈ ನೋಟಿಸ್ ನೀಡಿವೆ.
ಚೀನಾದೊಂದಿಗೆ ನಂಟಿರುವ ಸಂಸ್ಥೆಗಳಿಂದ 'ನ್ಯೂಸ್‌ಕ್ಲಿಕ್' ಪೋರ್ಟಲ್ ಹಣಕಾಸು ನೆರವು ಪಡೆದಿದೆ ಎಂದು ಆರೋಪಿಸಿ 'ನ್ಯೂಯಾರ್ಕ್ ಟೈಮ್ಸ್'ನಲ್ಲಿ ಪ್ರಕಟವಾಗಿದ್ದ ವರದಿ ಪ್ರಸ್ತಾಪಿಸಿ ಮಾತನಾಡಿದ್ದ ಗೋಯಲ್, 'ನ್ಯೂಸ್‌ಕ್ಲಿಕ್' ಹಾಗೂ ವಿರೋಧ ಪಕ್ಷಗಳ ನಡುವಿನ ಸಂಬಂಧ ಪ್ರಶ್ನಿಸಿದ್ದರು.
ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿತ್ತು.
ನಾಟಕೀಯ ಬೆಳವಣಿಗೆ: ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಟಿಎಂಸಿ ಸಂಸದ ಡೆರೆಕ್ ಒಬ್ರಯಾನ್ ಅವರನ್ನು ಸದನದಿಂದ ಅಮಾನತು ಮಾಡುತ್ತಿರುವುದಾಗಿ ಸಭಾಪತಿ ಜಗದೀಪ್ ಧನಕರ್ ಘೋಷಿಸಿದ್ದರು.
ಬೆಳಿಗ್ಗೆ ಕಲಾಪ ಆರಂಭಗೊಂಡಾಗ, ಒಬ್ರಯಾನ್ ಅವರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಧನಕರ್, ಒಬ್ರಯಾನ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡುವ ಸಂಬಂಧ ಸೂಚನೆ ಮಂಡಿಸುವಂತೆ ಸದನ ನಾಯಕ ಪೀಯೂಷ್ ಗೋಯಲ್ ಅವರಿಗೆ ಸೂಚಿಸಿದರು.
ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾರಣಕ್ಕೆ ಒಬ್ರಯಾನ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಒಬ್ರಯಾನ್ ಅವರನ್ನು ಅಮಾನತುಗೊಳಿಸುವಂತೆ ಕೋರುವ ಸೂಚನೆಯೊಂದನ್ನು ಮಂಡಿಸುವುದಾಗಿ ಗೋಯಲ್ ಹೇಳಿದರು.
'ನಿಮ್ಮನ್ನು ಅಮಾನತುಗೊಳಿಸಲಾಗಿದೆ. ಸದನದಿಂದ ಹೊರ ನಡೆಯಿರಿ' ಎಂದು ಒಬ್ರಯಾನ್ ಉದ್ದೇಶಿಸಿ ಹೇಳಿದ ಧನಕರ್, ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಿದರು.
ಕಲಾಪ ಮತ್ತೆ ಆರಂಭಗೊಂಡಾಗ, ಒಬ್ರಯಾನ್ ವರ್ತನೆ ಕುರಿತು ಧನಕರ್ ಅವರು ಎಲ್ಲ ಸದಸ್ಯರ ಅಭಿಪ್ರಾಯ ಪಡೆದ ನಂತರ, ಅವರನ್ನು ಅಮಾನತುಗೊಳಿಸುವ ನಿರ್ಣಯವನ್ನು ಮತಕ್ಕೆ ಹಾಕದಿರಲು ತೀರ್ಮಾನಿಸಿದರು. ಒಬ್ರಯಾನ್ ಕಲಾಪಕ್ಕೆ ಹಾಜರಾಗಬಹುದು ಎಂದು ಘೋಷಿಸಿದರು.
ದುಬೆ ಹೇಳಿಕೆ: ಕಾಂಗ್ರೆಸ್ ಸಂಸದರಿಂದ ಸ್ಪೀಕರ್ ಭೇಟಿ
: 'ನ್ಯೂಸ್ ಕ್ಲಿಕ್' ಸುದ್ದಿ ಪೋರ್ಟಲ್ ವಿಷಯವಾಗಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ್ದ ವರದಿ ಕುರಿತ ಚರ್ಚೆ ವೇಳೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕದ ಕ್ರಮವನ್ನು ವಿರೋಧಿಸಿರುವ ಕಾಂಗ್ರೆಸ್ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದಾರೆ.
ವಿರೋಧ ಪಕ್ಷದ ನಾಯಕ ಅಧಿರ್ ರಂಜನ್ ಚೌಧರಿ ಸಂಸದರಾದ ಶಶಿ ತರೂರ್ ಗೌರವ್ ಗೋಗೊಯಿ ಮಾಣಿಕಂ ಟ್ಯಾಗೋರ್ ಹಾಗೂ ಕೆ.ಸುರೇಶ್ ಅವರು ಸ್ಪೀಕರ್ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಇಂಡಿಯಾ' ಮೈತ್ರಿಕೂಟದ ಸಭೆಯಲ್ಲಿಯೂ ಈ ವಿಷಯ ಕುರಿತು ಚರ್ಚಿಸಲಾಗಿದೆ. ಸೋಮವಾರದ ಕಲಾಪದ ವೇಳೆ ಈ ವಿಷಯ ಪ್ರಸ್ತಾಪಿಸಿದ್ದ ದುಬೆ 'ನ್ಯೂಸ್‌ಕ್ಲಿಕ್ ಭಾರತ ವಿರೋಧಿ ಗುಂಪಾದ ತುಕ್ಡೆ ತುಕ್ಡೆ ಭಾಗವಾಗಿದೆ. 2005ರಿಂದ 2014ರ ಅವಧಿಯಲ್ಲಿ ಚೀನಾ ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ ಹಣ ನೀಡಿತ್ತು... ಕಾಂಗ್ರೆಸ್ ದೇಶವನ್ನು ವಿಭಜಿಸಲು ಬಯಸುತ್ತದೆ' ಎಂದಿದ್ದರು.
ವಿಪಕ್ಷಗಳು ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದವು. ದುಬೆ ಅವರ ಭಾಷಣದ ಕೆಲ ಭಾಗಗಳನ್ನು ಕಡತದಿಂದ ತೆಗೆದು ಹಾಕಲಾಗಿದೆ ಎಂದು ಲೋಕಸಭಾ ಕಾರ್ಯಾಲಯ ಸೋಮವಾರ ಕಳಿಸಿದ್ದ ಇ-ಮೇಲ್‌ನಲ್ಲಿ ತಿಳಿಸಲಾಗಿತ್ತು. ನಂತರ ಕಡತದಿಂದ ತೆಗೆದುಹಾಕಲಾಗಿದ್ದ ಭಾಗಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು.
'ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವುದೇ ಅಂತಿಮವಾದುದು' ಎಂದು ಅಧಿಕಾರಿಗಳು ಪತ್ರಕರ್ತರಿಗೆ ಪ್ರತಿಕ್ರಿಯಿಸಿದ್ದರು.