ಕೊಚ್ಚಿ: ಮಕ್ಕಳಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯನ್ನು ನಿಯಂತ್ರಿಸಲು ಕಾನೂನು ತರಲು ಸರ್ಕಾರಕ್ಕೆ ಕೇರಳ ಹೈಕೋರ್ಟ್ ಸೂಚಿಸಿದೆ. ಮಕ್ಕಳ ಶಸ್ತ್ರಚಿಕಿತ್ಸೆಯು ಸಂವಿಧಾನದ ಹಕ್ಕುಗಳ ಮೇಲಿನ ಅತಿಕ್ರಮಣವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಮಕ್ಕಳ ಒಪ್ಪಿಗೆ ಇಲ್ಲದೇ ಇಂತಹ ಶಸ್ತ್ರಚಿಕಿತ್ಸೆ ಮಾಡುವುದರಿಂದ ಅವರ ಘನತೆ ಮತ್ತು ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ.
ಇದು ಮಕ್ಕಳು ಬೆಳೆದಂತೆ ಭಾವನಾತ್ಮಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಮೂರು ತಿಂಗಳೊಳಗೆ ಕಾನೂನು ರೂಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಮಕ್ಕಳ ತಜ್ಞರನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ನ್ಯಾಯಮೂರ್ತಿ ವಿ.ಜಿ.ಅರುಣ್ ಸಲಹೆ ನೀಡಿದ್ದಾರೆ. ಮಕ್ಕಳಿಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಬೇಕಾದರೆ ಈ ಸಮಿತಿಯ ಅನುಮತಿ ಪಡೆಯಬೇಕು.
ತಲಶ್ಶೇರಿ ಮೂಲದ ಪೋಷಕರು ತಮ್ಮ ಮಗುವಿಗೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಪಡಿಸುವಂತೆ ಹೈಕೋರ್ಟ್‍ನ ಮೊರೆ ಹೋಗಿದ್ದರು. ಮಗು ಜನಿಸಿದಾಗ, ಹುಡುಗಿಯ ಜನನಾಂಗವಿತ್ತು. ಆದರೆ ನಂತರ ಇದು ಬದಲಾಯಿತು ಎಂದು ಪೋಷಕರು ಹೇಳುತ್ತಾರೆ.
ಹಾರ್ಮೋನುಗಳ ಬದಲಾವಣೆಯಿಂದಾಗಿ, ಮಗುವಿನ ಜನನಾಂಗವು ನಂತರ ಹುಡುಗರಂತೆ ಬದಲಾಯಿತು. ಈ ಹಿನ್ನೆಲೆಯಲ್ಲಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಪೋಷಕರು ಆಸ್ಪತ್ರೆಯ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದ ಆದೇಶದ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದರು. ಈ ಹಿನ್ನೆಲೆಯಲ್ಲಿ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದು, ಎರಡು ತಿಂಗಳೊಳಗೆ ಶಸ್ತ್ರಚಿಕಿತ್ಸೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.