ಸಿಂಗಪುರ: ಸಿಂಗಪುರದಲ್ಲಿ ಕ್ರೂಸ್‌ನಿಂದ ಜಲಸಂಧಿಗೆ ಬಿದ್ದಿದ್ದ 64 ವರ್ಷದ ಭಾರತೀಯ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಅವರ ಮಗ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, 'ತಾಯಿ ರೀಟಾ ಸಹಾನಿ ಮತ್ತು ತಂದೆ ಜಕೇಶ್ ಸಹಾನಿ ಅವರಿದ್ದ ಸ್ಪೆಕ್ಟ್ರಮ್ ಆಫ್ ದಿ ಸೀಸ್ ಐಷಾರಾಮಿ ಕ್ರೂಸ್‌ನ ದೂರದರ್ಶನದ ತುಣುಕನ್ನು ನೋಡಿದ ನಂತರ, ದುರದೃಷ್ಟವಶಾತ್ ನನ್ನ ತಾಯಿ ನಿಧನರಾಗಿರುವುದನ್ನು ನಾವು ತಿಳಿದುಕೊಂಡಿದ್ದೇವೆ ಎಂದು ವಿವೇಕ್ ಸಹಾನಿ ಮಂಗಳವಾರ ತಿಳಿಸಿದ್ದಾರೆ. ನಮ್ಮ ತಾಯಿಗೆ ಈಜು ಬರುವುದಿಲ್ಲ ಎಂದು ದಂಪತಿಯ ಮತ್ತೊಬ್ಬ ಮಗ ಅಪೂರ್ವ್ ಸಹಾನಿ ಸೋಮವಾರ ಹೇಳಿದ್ದರು.
ರಾಯಭಾರ ಕಚೇರಿಯಿಂದಲೂ ಮಾಹಿತಿ
ಘಟನೆಯ ಬಗ್ಗೆ ತಿಳಿಸಿದಾಗಿನಿಂದ ಮಹಿಳೆಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಸಿಂಗಪುರದಲ್ಲಿರುವ ಭಾರತದ ಹೈಕಮಿಷನ್ ಮಂಗಳವಾರ ತಿಳಿಸಿದೆ. ‘ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ನಾವು ಸಿಂಗಪುರದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಮತ್ತು ಕಾನೂನು ಕಾರ್ಯವಿಧಾನಗಳನ್ನು ಸುಗಮಗೊಳಿಸುತ್ತಿದ್ದೇವೆ’ ಎಂದು ರಾಯಭಾರ ಕಚೇರಿ ಮಂಗಳವಾರ ರಾತ್ರಿ ಹೇಳಿದೆ.
ಈ ಸಂಬಂಧ ಹೆಚ್ಚಿನ ನೆರವಿಗಾಗಿ ರಾಯಭಾರ ಕಚೇರಿಯು ರಾಯಲ್ ಕೆರಿಬಿಯನ್ ಕ್ರೂಸ್ ಕಂಪನಿಯ ಭಾರತದ ಮುಖ್ಯಸ್ಥರನ್ನು ಸಂಪರ್ಕಿಸಿದೆ. ಈ ಸಂದರ್ಭ ಕುಟುಂಬಕ್ಕೆ ನೆರವು ಸಂಪೂರ್ಣವಾಗಿ ಬದ್ಧವಾಗಿರುವುದಾಗಿ ಕಂಪನಿ ತಿಳಿಸಿದೆ ಎಂದು ಹೇಳಿದೆ. ದಂಪತಿ ಸ್ಪೆಕ್ಟ್ರಮ್ ಆಫ್ ದಿ ಸೀಸ್ ಕ್ರೂಸ್‌ನಲ್ಲಿ ನಾಲ್ಕು ದಿನಗಳ ಪ್ರವಾಸದಲ್ಲಿದ್ದರು. ಸೋಮವಾರ ಬೆಳಿಗ್ಗೆ ಪೆನಾಂಗ್‌ನಿಂದ ಕ್ರೂಸ್ ಸಿಂಗಪುರಕ್ಕೆ ಹಿಂತಿರುಗುತ್ತಿದ್ದಾಗ ತಮ್ಮ ಪತ್ನಿ ಕಾಣದಿದ್ದಾಗ 70 ವರ್ಷದ ಜಕೇಶ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಬಳಿಕ, ಪೊಲೀಸ್ ಕೋಸ್ಟ್ ಗಾರ್ಡ್ ಮತ್ತು ರಿಪಬ್ಲಿಕ್ ಆಫ್ ಸಿಂಗಪುರ ನೌಕಾಪಡೆ, ಬಂದರು ಮತ್ತು ಜಲಸಂಧಿಯ ಉದ್ಧಕ್ಕೂ ಹುಡುಕಾಟದಲ್ಲಿ ತೊಡಗಿವೆ.