ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ -3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ್ದು, ಇದು ಪ್ರತಿಯೊಬ್ಬ ಭಾರತೀಯನ ಸಾಮೂಹಿಕ ಯಶಸ್ಸು ಮತ್ತು ಇಸ್ರೋದ ಇಂದಿನ ಸಾಧನೆಯು ನಿರಂತರತೆಯ ಸಾಹಸವನ್ನು ಪ್ರತಿಬಿಂಬಿಸುತ್ತದೆ. ಇದು ನಿಜವಾಗಿಯೂ ಅದ್ಭುತ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಹೊಂದಿರುವ ಉತ್ಕೃಷ್ಟ ದೇಶ ಇಂದು ತನ್ನ ಆರು ದಶಕಗಳ ಸುದೀರ್ಘ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮತ್ತೊಂದು ಸಾಧನೆಗೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಇಂದು ಇಡೀ ಜಗತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಕಡೆಗೆ ನೋಡುತ್ತಿದೆ. ಇದು ಎಲ್ಲಾ ಭಾರತೀಯರಿಗೆ ವಿಶೇಷ ಹೆಮ್ಮೆಯ ವಿಷಯ ಖರ್ಗೆ ಅವರು ತಿಳಿಸಿದ್ದಾರೆ.
"ನಮ್ಮ ವಿಜ್ಞಾನಿಗಳು, ಬಾಹ್ಯಾಕಾಶ ಇಂಜಿನಿಯರ್‌ಗಳು, ಸಂಶೋಧಕರು ಮತ್ತು ಈ ಮಿಷನ್ ನಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರ ಗಮನಾರ್ಹ ಶ್ರಮ, ಅಪ್ರತಿಮ ಜಾಣ್ಮೆ ಮತ್ತು ಅಚಲವಾದ ಸಮರ್ಪಣೆಗೆ ನಾವು ಋಣಿಯಾಗಿದ್ದೇವೆ" ಎಂದು ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದಾರೆ.
ಇಸ್ರೋದ ಇಂದಿನ ಸಾಧನೆಯು ನಿರಂತರತೆಯ ಸಾಹಸವನ್ನು ಪ್ರತಿಬಿಂಬಿಸುತ್ತದೆ ಮತ್ತು ನಿಜವಾಗಿಯೂ ಇದೊಂದು ಅದ್ಭುತ ಸಾಧನೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.