ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಮಾತುಕತೆ ಮೂಲಕ ಪೂರ್ವ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಐದು-ಆರು ಕಡೆ ಘರ್ಷಣಾ ಸ್ಥಳಗಳಲ್ಲಿ ಭಾರತ ಮತ್ತು ಚೀನಾ ಪ್ರಗತಿ ಸಾಧಿಸಿವೆ ಹಾಗೂ ಉಳಿದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ನಡೆಯುತ್ತಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ಹೇಳಿದ್ದಾರೆ.
ದೀರ್ಘಕಾಲದ ಗಡಿ ವಿವಾದದ ಕುರಿತು ಸರ್ಕಾರದ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಅವರು, ಪರಿಹಾರ ಕಂಡುಹಿಡಿಯಲು ಎರಡೂ ಕಡೆಯವರು ನಿರತರಾಗಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ, ಮಾತುಕತೆ ಫಲಪ್ರದವಾಗುವುದಿಲ್ಲ, ಪ್ರಗತಿ ಇರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಕಳೆದ ಮೂರು ವರ್ಷಗಳಲ್ಲಿ ಕೆಲ ಪ್ರದೇಶಗಳಲ್ಲಿ ಪರಿಹಾರಗಳನ್ನು ಕಂಡುಹಿಡಿಯಲಾಗಿದೆ' ಎಂದು ಅವರು ಹೇಳಿದ್ದಾರೆ.
ಗಡಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸರ್ಕಾರ ಆದ್ಯತೆ ನೀಡಿದೆ. ಸೇನೆಯನ್ನು ತ್ವರಿತವಾಗಿ ನಿಯೋಜಿಸಲು ಮತ್ತು ಚೀನಾದ ಮಿಲಿಟರಿ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯವನ್ನು ಸಶಸ್ತ್ರ ಪಡೆಗಳು ಹೊಂದಿವೆ ಎಂದರು.
ಮೂಲಸೌಕರ್ಯಗಳ ತ್ವರಿತ ಹೆಚ್ಚಳಕ್ಕೆ ಸರ್ಕಾರ ಗಮನ ಹರಿಸಿರುವುದರಿಂದ ಕಳೆದ ಕೆಲ ವರ್ಷಗಳಲ್ಲಿ ಗಡಿ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳು ಮತ್ತು ನಾಗರಿಕರ ಚಲನವಲನ ಹೆಚ್ಚಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುವವರೆಗೆ ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಭಾರತ ಚೀನಾಕ್ಕೆ ಸ್ಪಷ್ಟಪಡಿಸಿದೆ.
ಭೂತಾನ್ ಮತ್ತು ಅಸ್ಸಾಂ ನಡುವೆ ರೈಲು ಸಂಪರ್ಕಕ್ಕಾಗಿ ಭಾರತ ಮಾತುಕತೆ ನಡೆಸುತ್ತಿದೆ ಎಂದು ಅವರು ಹೇಳಿದರು.