ಬದಿಯಡ್ಕ: ಶಾಸ್ತ್ರಗಳನ್ನು ನಂಬಿ ಮುನ್ನಡೆದಾಗ ಜೀವನದಲ್ಲಿ ಉನ್ನತಿಯನ್ನು ಕಾಣಲು ಸಾಧ್ಯವಿದೆ. ಶ್ರೀರಾಮನ ಆದರ್ಶ ಗುಣಗಳು ನಮ್ಮ ಜೀವನಕ್ಕೆ ಪಾಠವಾಗಿದೆ. ಸತ್ಯ ಧರ್ಮದಲ್ಲಿ ನಾವು ನಡೆದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ವಸುಧಾ ಗೋಪಿನಾಥ ಶೆಣೈ ಹೇಳಿದರು.
ರಾಮಾಯಣ ವಾರಾಚರಣೆ ಸಮಿತಿ ಬದಿಯಡ್ಕ ಇವರ ನೇತೃತ್ವದಲ್ಲಿ ಬದಿಯಡ್ಕ ಶ್ರೀರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ನಡೆಯುತ್ತಿರುವ ರಾಮಾಯಣ ಮಾಸದ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಅವರು ದೀಪಬೆಳಗಿಸಿ ಅವರು ಮಾತನಾಡಿದರು.
ಅಭ್ಯಾಗತರಾಗಿ ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಚೆಟ್ಟಿಯಾರ್ ಬದಿಯಡ್ಕ ಮಾತನಾಡಿ ನಮ್ಮ ಪುರಾಣಗಳ ಕುರಿತು ಆಳವಾದ ಜ್ಞಾನವನ್ನು ಸಂಪಾದಿಸಿ ಮಕ್ಕಳಿಗೆ ದಾರೆಯೆರೆಯಬೇಕು. ರಾಮಾಯಣದ ಪ್ರತಿಯೊಂದು ಘಟನೆಗಳೂ ನಮ್ಮ ಬದುಕಿಗೆ ಪಾಠವಾಗಿದೆ ಎಂಬುದನ್ನು ನಾವು ತಿಳಿದುಕೊಂಡಾಗ ಆತ್ಮೋನ್ನತಿ ಸಾಧ್ಯ ಎಂದರು.
ಅಧ್ಯಾಪಕ ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ಕೆಲವಾರು ವರ್ಷಗಳಿಂದ ಈ ಯೋಗಕೇಂದ್ರವು ಕೆಲವಾರು ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ. ರಾಮಾನುಗ್ರಹದ ಮೂಲಕ ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿ ಎಂದರು. ಅಧ್ಯಾಪಿಕೆ ಶಾಂತಕುಮಾರಿ ಪಳ್ಳತ್ತಡ್ಕ ಸ್ವಾಗತಿಸಿ, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಕರಿಂಬಿಲ ಲಕ್ಷ್ಮಣ ಪ್ರಭು ವಂದಿಸಿದರು. ವಿಜಯಕುಮಾರ್ ಬಾರಡ್ಕ ಪ್ರಾರ್ಥನೆ ಹಾಡಿದರು. ಯೋಗಗುರು ಸೂರ್ಯನಾರಾಯಣ ವಳಮಲೆ ರಾಮತಾರಕ ಜಪ ನಡೆಸಿಕೊಟ್ಟರು. ಸಭಾಕಾರ್ಯಕ್ರಮದ ನಂತರ ವಿದುಷಿ ರೂಪ ಕನಕಪ್ಪಾಡಿ ಮತ್ತು ಬಳಗದವರಿಂದ ಸಂಗೀತ ಕಚೇರಿ ಜರಗಿತು.