ಪಟ್ಟಣಂತಿಟ್ಟ: ಕಾಲೇಜು ಶುಲ್ಕ ಭರಿಸಲಾಗದೇ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಮನಕಲಕುವ ಘಟನೆ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಕೊನ್ನಿ ಏರಿಯಾದಲ್ಲಿ ಕಳೆದ ಶನಿವಾರ (ಜು.29) ನಡೆದಿದೆ. ಮೃತಳನ್ನು ಅತುಲ್ಯ (20) ಎಂದು ಗುರುತಿಸಲಾಗಿದೆ.
ಈಕೆ ಬೆಂಗಳೂರಿನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ದ್ವಿತೀಯ ವರ್ಷದ ಅಡ್ಮಿಷನ್ಗೆ ಹಣದ ಕೊರತೆ ಹಿನ್ನೆಲೆಯಲ್ಲಿ ಮನನೊಂದು ಸಾವಿಗೆ ಶರಣಾಗಿದ್ದಾಳೆ ಎಂದು ಆಕೆಯ ಕುಟುಂಬ ತಿಳಿಸಿದೆ.
ಸಾಲವು ಸೇರಿದಂತೆ ಬೆಂಗಳೂರಿನ ಖಾಸಗಿ ಟ್ರಸ್ಟ್ ಒಂದರ ಸಹಾಯದಿಂದ ಅತುಲ್ಯ ನರ್ಸಿಂಗ್ ಮಾಡುತ್ತಿದ್ದಳು. ಆದರೆ, ಟ್ರಸ್ಟ್ ಅಧಿಕಾರಿಗಳು ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಂತರ ಅತುಲ್ಯ ಸೇರಿದಂತೆ ಹಲವಾರು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಡ್ಡಿಯಾಯಿತು. ಇತ್ತೀಚೆಗಷ್ಟೇ ಮೊದಲ ವರ್ಷ ಮುಗಿಸಿ ಅತುಲ್ಯ ಮನೆಗೆ ಮರಳಿದ್ದಳು. ದ್ವಿತೀಯ ವರ್ಷದ ದಾಖಲಾತಿಗೆ ಹಣದ ಕೊರತೆಯಿಂದ ಓದು ಮುಂದುವರಿಲು ಸಾಧ್ಯವಾಗುವುದಿಲ್ಲ ಎಂಬ ನೋವಿನಲ್ಲಿ ಖಿನ್ನತೆಗೆ ಜಾರಿದ್ದಳು.
ಆಕೆಯ ತಂದೆಯ ಪ್ರಕಾರ, ಹೇಗಾದರೂ ಮಾಡಿ ಓದನ್ನು ಮುಂದುವರಿಸಬೇಕು ಅಂತ ಅತುಲ್ಯ ಸಾಲವನ್ನು ಪಡೆಯಲು ಹಲವಾರು ಬ್ಯಾಂಕ್‌ಗಳನ್ನು ಸಂಪರ್ಕಿಸಿದ್ದಳು. ಆದರೆ ಆಕೆಯ ಪ್ರಯತ್ನ ಫಲ ಕೊಡಲಿಲ್ಲ. ಅವಳು ದ್ವಿತೀಯ ವರ್ಷದ ತರಗತಿಗಳಿಗೆ ದಾಖಲಾದಾಗ, ಕಾಲೇಜು ಆಡಳಿತ ಮಂಡಳಿ ಮೊದಲ ವರ್ಷದ ಶುಲ್ಕವನ್ನು ಪಾವತಿಸಲು ಮತ್ತು ದ್ವಿತೀಯ ವರ್ಷದ ಪ್ರವೇಶಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಲು ಹೇಳಿತ್ತು. ಕೊಂಚ ಶುಲ್ಕವನ್ನು ಪಾವತಿಸಿ ಅತುಲ್ಯ ಮನೆಗೆ ಮರಳಿದಳು. ಆದರೆ, ಓದು ಮುಂದುವರಿಸಲು ಆರ್ಥಿಕ ಸಂಕಷ್ಟ ಸವಾಲಾಗಿತ್ತು. ಎಷ್ಟೇ ಆರ್ಥಿಕ ಸಂಕಷ್ಟವಿದ್ದರೂ ನನ್ನ ಮಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳುಹಿಸಲು ನಾನು ಏನು ಬೇಕಾದರೂ ಮಾಡುತ್ತಿದ್ದೆ. ಆದರೂ ಅವಳು ಆತುರಪಟ್ಟಳು ಎಂದು ಆತುಲ್ಯ ತಂದೆ ಕಣ್ಣೀರಾಕಿದ್ದಾರೆ.
ಕಳೆದ ಶನಿವಾರ ರಾತ್ರಿ ಅತುಲ್ಯ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಕೊಝಂಚೇರಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆಕೆಯ ಪ್ರಾಣ ಉಳಿಸಲಾಗಲಿಲ್ಲ. ಭಾನುವಾರ ಸಂಜೆ ಮನೆಯಲ್ಲಿ ಮೃತದೇಹದ ಅಂತ್ಯಸಂಸ್ಕಾರ ನಡೆಸಲಾಯಿತು.