ನವದೆಹಲಿ: ಭಾರತೀಯ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆಪಾದನೆಯ ಪ್ರಕರಣದಲ್ಲಿ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ನಿರ್ಗಮಿತ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಸಾಕಷ್ಟು ಸಾಕ್ಷ್ಯಗಳಿವೆ ಎಂದು ದೆಹಲಿ ಪೊಲೀಸರು ಶುಕ್ರವಾರ ಮೆಟ್ರೊಪಾಲಿಟನ್ ಕೋರ್ಟ್‌ಗೆ ತಿಳಿಸಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಸಹ ಆರೋಪಿ, ಅಮಾನತುಗೊಂಡಿರುವ ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧ ಮೇಲ್ನೋಟಕ್ಕೆ ಪ್ರಮುಖ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸರು, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರ ಎದುರು ಹೇಳಿಕೆ ನೀಡಿದ್ದಾರೆ.
ಆರೋಪಿ ಸಿಂಗ್ ವಿರುದ್ಧ ಐಪಿಸಿಯ 354 (ಮಹಿಳೆ ಮೇಲೆ ದೌರ್ಜನ್ಯ), 354-ಎ (ಲೈಂಗಿಕ ಕಿರುಕುಳ) ಮತ್ತು 354-ಡಿ (ಹಿಂಬಾಲಿಸುವಿಕೆ) ಅಡಿ ಆರೋಪಗಳನ್ನು ಹೊರಿಸಲು ಸಾಕಷ್ಟು ಪುರಾವೆಗಳಿವೆ ಎಂದು ದೆಹಲಿ ಪೊಲೀಸರ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಕರಣದ ಮುಂದಿನ ವಿಚಾರಣೆ ಆ. 19ರಂದು ನಡೆಯಲಿದ್ದು, ಅಂದು ದೂರುದಾರರ ಪರ ವಕೀಲರು ವಾದ ಮಂಡಿಸುವ ಸಾಧ್ಯತೆ ಇದೆ.
ಆರು ಬಾರಿ ಸಂಸದರಾಗಿರುವ ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಜೂನ್ 15ರಂದು ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ಬಿಡಬಾರದು, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎನ್ನುವುದು ಸೇರಿ ಕೆಲವು ಷರತ್ತುಗಳೊಂದಿಗೆ ಮೆಟ್ರೋಪಾಲಿಟನ್ ನ್ಯಾಯಾಲಯವು ಜುಲೈ 20 ರಂದು ಸಿಂಗ್ ಮತ್ತು ತೋಮರ್‌ಗೆ ತಲಾ ₹25 ಸಾವಿರಗಳ ಬಾಂಡ್ ಪಡೆದು ಜಾಮೀನು ನೀಡಿತ್ತು.