ಕಾಸರಗೋಡು: ರಾಜ್ಯಾದ್ಯಂತ ಅಕ್ಷಯ ಕೇಂದ್ರಗಳ ವಿಜಿಲೆನ್ಸ್ ತಪಾಸಣೆಯ ಅಂಗವಾಗಿ ಕಾಸರಗೋಡಿನ ವಿವಿಧ ಅಕ್ಷಯ ಕೇಂದ್ರಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಅವ್ಯವಹಾರ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅಧಿಕ ಶುಲ್ಕ ವಸೂಲಿ ಮಾಡಿ ಸಾರ್ವಜನಿಕರನ್ನು ಶೋಷಣೆ ಮಾಡಲಾಗುತ್ತಿದೆ ಎಂಬ ಗೌಪ್ಯ ಮಾಹಿತಿ ಮೇರೆಗೆ ಆಪರೇಷನ್ ಇ-ಸೇವಾ ಎಂದು ಕರೆಯಲಾಗಿದ್ದು, ಕಾಸರಗೋಡು ವಿಜಿಲೆನ್ಸ್ ಡಿವೈಎಸ್ ಪಿ ವಿ.ಕೆ.ವಿಶ್ವಂಭರನ್ ನೇತೃತ್ವದಲ್ಲಿ ಮೂರು ಸ್ಕ್ವಾಡ್ ಗಳಲ್ಲಿ ತನಿಖೆ ನಡೆದಿದೆ. ಡಿವೈಎಸ್ಪಿ ನೇತೃತ್ವದಲ್ಲಿ ಆರಿಕ್ಕಾಡಿ, ಕಾಸರಗೋಡು ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಬಿ.ಸಿ.ರೋಡ್ ಗಳಲ್ಲಿ ತಪಾಸಣೆ ನಡೆಸಲಾಯಿತು. ವಿಜಿಲೆನ್ಸ್ ಇನ್ಸ್ ಪೆಕ್ಟರ್ ಸುನುಮೋನ್ ನೇತೃತ್ವದಲ್ಲಿ ಚಟ್ಟಂಚಾಲ್ ಮತ್ತು ಪಡ್ಪು ನಲ್ಲಿ ಹಾಗೂ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ನೇತೃತ್ವದಲ್ಲಿ ಕಾಞಂಗಾಡ್ ಅಕ್ಷಯ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಯಿತು.
ವಿಪರೀತ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಪತ್ತೆಮಾಡಲು ಸಾಧ್ಯವಾಗದಿದ್ದರೂ, ಹಲವೆಡೆ ಸೇವೆಯ ಶುಲ್ಕವನ್ನು ದಾಖಲಿಸುವ ಫಲಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶಿಸದಿರುವುದು ಕಂಡುಬಂದಿದೆ ಎಂದು ಜಾಗೃತ ದಳ ತಿಳಿಸಿದೆ. ಇದಲ್ಲದೇ ಸೇವೆಗೆ ಬರುವ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆಯೂ ದೂರುಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವ್ಯವಹಾರ ಕುರಿತು ಸಿದ್ಧಪಡಿಸಿರುವ ವರದಿಯನ್ನು ಜಿಲ್ಲಾಧಿಕಾರಿ ಹಾಗೂ ಅಕ್ಷಯ ಜಿಲ್ಲಾ ಸಂಯೋಜಕರಿಗೆ ನೀಡಲಾಗುವುದು ಎಂದು ವಿಜಿಲೆನ್ಸ್ ತಿಳಿಸಿದೆ. ಕಾಸರಗೋಡಿನ Àಲವೆಡೆ ಸರ್ಕಾರಕ್ಕೆ ಪಾವತಿಸಿದ ಶುಲ್ಕದ ಲೆಡ್ಜರ್ ಅನ್ನು ನಿರ್ವಹಿಸುತ್ತಿದ್ದರೂ ಸಾರ್ವಜನಿಕರಿಗೆ ರಸೀದಿ ನೀಡದಿರುವುದು ಕಂಡು ಬಂದಿದೆ. ಈ ಬಗ್ಗೆ ಯಾವುದೇ ದಾಖಲೆಗಳನ್ನು ಇಟ್ಟುಕೊಂಡಿಲ್ಲ.