ಬೆಂಗಳೂರು: ವಿಶ್ವದ ಗಮನ ಸೆಳೆದಿರುವ ಅಂತರಿಕ್ಷ ಕಾರ್ಯಕ್ರಮ 'ಚಂದ್ರಯಾನ-3'ರ ನೌಕೆ ಚಂದ್ರನನ್ನು ಸಮೀಪಿಸುತ್ತಿರುವಂತೆಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಮತ್ತಷ್ಟು ಅಧ್ಯಯನ ಆರಂಭಿಸಿದೆ.
ಚಂದ್ರನ ವಾತಾವರಣ ಹಾಗೂ ಸುತ್ತಲಿನ ಬಾಹ್ಯಾಕಾಶದಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಇಸ್ರೊ ಪರಿಶೀಲನೆ ನಡೆಸುತ್ತಿದೆ.
'ಭವಿಷ್ಯದಲ್ಲಿನ ಬಾಹ್ಯಾಕಾಶ ಕಾರ್ಯಕ್ರಮಗಳು ವೈಜ್ಞಾನಿಕ ಅನ್ವೇಷಣೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅಂತರಿಕ್ಷ ಸಂಪನ್ಮೂಲವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದನ್ನು ಕೂಡ ಒಳಗೊಂಡಿರುತ್ತವೆ. ಈ ಕಾರಣಕ್ಕಾಗಿ, ಚಂದ್ರನ ಪರಿಸರ ಕುರಿತ ಹೆಚ್ಚಿನ ಅರಿವು ಗ್ರಹಗಳ ಕಕ್ಷೆಗಳಲ್ಲಿ ಎದುರಾಗಬಹುದಾದ ಅಪಾಯಗಳನ್ನು ಎದುರಿಸುವ ಕಾರ್ಯಾಚರಣೆ ರೂಪಿಸಲು ನೆರವಾಗುತ್ತದೆ' ಎಂದು ಇಸ್ರೊ ವಿಜ್ಞಾನಿಗಳು ಹೇಳಿದ್ದಾರೆ.
ಕಳೆದ ಜುಲೈಗೆ ಅಂತ್ಯಗೊಂಡ ಅವಧಿಯಲ್ಲಿ ಚಂದ್ರನ ಕಕ್ಷೆಯಲ್ಲಿ ಆರು ಗಗನನೌಕೆಗಳು ಪರಿಭ್ರಮಣ ಮಾಡುತ್ತಿವೆ. ನಾಸಾದ ನಾಲ್ಕು, ಇಸ್ರೊದ 'ಚಂದ್ರಯಾನ-2' ಕೊರಿಯಾದ ಗಗನನೌಕೆ 'ಕೆಪಿಎಲ್‌ಒ' ಕಕ್ಷೆಯಲ್ಲಿವೆ.
ಭಾರತದ 'ಚಂದ್ರಯಾನ-1' ಹಾಗೂ 2009ರಲ್ಲಿ ಜಪಾನ್ ಉಡ್ಡಯನ ಮಾಡಿದ್ದ 'ಔನಾ' ನೌಕೆ ಈಗ ನಿಷ್ಕ್ರಿಯಗೊಂಡಿದ್ದರೂ, ಕಕ್ಷೆಯಲ್ಲಿ ಪರಿಭ್ರಮಿಸುತ್ತಿವೆ.
, ರಷ್ಯಾದ 'ಲೂನಾ-25' ನೌಕೆಯು ಆಗಸ್ಟ್ 16ರ ವೇಳೆಗೆ ಚಂದ್ರನಿಂದ 100 ಕಿ.ಮೀ. ದೂರದಲ್ಲಿರುವ ಕಕ್ಷೆಯನ್ನು ಪ್ರವೇಶಿಸುವ ನಿರೀಕ್ಷೆ ಇದ್ದು, ಆಗಸ್ಟ್ 21-23ರ ನಡುವೆ ಈ ನೌಕೆ ಕೂಡ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. 'ಚಂದ್ರಯಾನ-3'ರ ಸಾಫ್ಟ್‌ಲ್ಯಾಂಡಿಂಗ್ ಆಗಸ್ಟ್ 23ರಂದು ನಿಗದಿಯಾಗಿದೆ.