ಗುಂಡ್ಲುಪೇಟೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಶನಿವಾರ ಭೇಟಿ ನೀಡಿ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಕಾವಾಡಿ ದಂಪತಿ ಬೊಮ್ಮ ಮತ್ತು ಬೆಳ್ಳಿ ಅವರನ್ನು ಭೇಟಿ ಮಾಡಿದರು.
ದೆಹಲಿಯಿಂದ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಷ್ಟ್ರಪತಿಯವರು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಸಿನಗುಡಿಯ ಹೆಲಿಪ್ಯಾಡ್‌ಗೆ ಮಧ್ಯಾಹ್ನ 3.30ಕ್ಕೆ ತಲುಪಿದರು.
ಅಲ್ಲಿಂದ ಕಾರಿನಲ್ಲಿ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿದರು. ತೆಪ್ಪಕ್ಕಾಡು ಆನೆ ಸಂವರ್ಧನಾ ಶಿಬಿರಕ್ಕೆ ಭೇಟಿ ನೀಡಿದ ಅವರು ಅಲ್ಲಿ ಬೊಮ್ಮ ಮತ್ತು ಬೆಳ್ಳಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಬುಡಕಟ್ಟು ಜನರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಶಿಬಿರದಲ್ಲಿ ಸಾಕಿದ ಆನೆಗಳಿಗೆ ಆಹಾರ ತಿನ್ನಿಸಿದರು.
ಸಂಜೆ 5.30ಕ್ಕೆ ಮತ್ತೆ ಹೆಲಿಕಾಪ್ಟರ್ ಮೂಲಕ ಮಸಿನಗುಡಿಗೆ ತೆರಳಿದರು. ಅಲ್ಲಿನ ಬಜಾರ್ ಪ್ರದೇಶದಲ್ಲಿ ನಿಂತಿದ್ದ ಜನರತ್ತ ಕೈಬೀಸಿ, ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಚಾಕಲೆಟ್ ವಿತರಿಸಿದರು.