ನವದೆಹಲಿ: 'ಅದು ಅಸ್ಪಷ್ಟತೆ, ಅತಿಶಯೋಕ್ತಿ, ಸುಳ್ಳುಗಳಿಂದ ಕೂಡಿದ, ಹಾರಿಕೆಯ ಭರವಸೆಗಳಿದ್ದ ಚುನಾವಣಾ ಪ್ರಚಾರ ಭಾಷಣ. ಮೋದಿ ಅವರು ಮುಂದಿನ ವರ್ಷ ತಮ್ಮ ಮನೆಯಲ್ಲೇ ರಾಷ್ಟ್ರ ಧ್ವಜಾರೋಹಣ ಮಾಡುತ್ತಾರೆ...'
ನವದೆಹಲಿ: 'ಅದು ಅಸ್ಪಷ್ಟತೆ, ಅತಿಶಯೋಕ್ತಿ, ಸುಳ್ಳುಗಳಿಂದ ಕೂಡಿದ, ಹಾರಿಕೆಯ ಭರವಸೆಗಳಿದ್ದ ಚುನಾವಣಾ ಪ್ರಚಾರ ಭಾಷಣ. ಮೋದಿ ಅವರು ಮುಂದಿನ ವರ್ಷ ತಮ್ಮ ಮನೆಯಲ್ಲೇ ರಾಷ್ಟ್ರ ಧ್ವಜಾರೋಹಣ ಮಾಡುತ್ತಾರೆ...'
ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ದೀರ್ಘ ಭಾಷಣ ಕುರಿತು ವಿರೋಧಪಕ್ಷಗಳ ನಾಯಕರ ವ್ಯಾಖ್ಯಾನವಿದು.
ಮೋದಿ ತಮ್ಮ ಮತ್ತು ತಮ್ಮ ವರ್ಚಸ್ಸಿನ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ. ಅವರು ಮುಂದಿನ ವರ್ಷ ತಮ್ಮ ಮನೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, 'ಮೋದಿಯವರ 10 ವರ್ಷದ ಸಾಧನೆ ನೋಡಲು ಅವರ ಭಾಷಣವನ್ನು ಕೇಳುವ ಅಗತ್ಯವಿಲ್ಲ. ಅವರ ಕೆಲಸಗಳೇ ಮೋದಿ ಸೋತಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತವೆ' ಎಂದಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು, ಮೋದಿ ಅವರ ಆಡಳಿತ ವೈಫಲ್ಯಗಳನ್ನು ದುರ್ನೀತಿ, ಅನ್ಯಾಯ ಮುಖ್ಯವಾಗಿ ದುರುದ್ದೇಶ ಎಂದು ವರ್ಗೀಕರಿಸಬಹುದು. ಭಾಷಣದಿಂದ ಅವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲಾಗದು ಎಂದಿದ್ದಾರೆ.
'ಬಿಜೆಪಿಯ ಒಂದೇ ಸಾಧನೆ ಎಂದರೆ ಆ ಪಕ್ಷದ ಆಡಳಿತವಿದ್ದ ರಾಜ್ಯಗಳಲ್ಲಿ ಶೇ 40ರಷ್ಟು ಕಮಿಷನ್. ಬಿಜೆಪಿಯ ಕಾರ್ಯವೈಖರಿಯು ವಾಷಿಂಗ್ ಮಷೀನ್‌ನ ರೀತಿ. ದಾಳಿಯ ಹೆಸರಲ್ಲಿ ವಿರೋಧಪಕ್ಷಗಳ ನಾಯಕರನ್ನು ಕೈಕಟ್ಟಿಹಾಕುವುದು, ನಂತರ ಪಕ್ಷಕ್ಕೆ ಸೇರಿಸಿಕೊಂಡು 'ಶುದ್ಧ'ಗೊಳಿಸುವುದು ಹಾಗೂ ಚುನಾಯಿತ ಸರ್ಕಾರಗಳನ್ನು ಪದಚ್ಯುತಗೊಳಿಸುವುದಾಗಿದೆ' ಎಂದು ಟೀಕಿಸಿದ್ದಾರೆ.